ಈಜು ಬರದೆ ನೀರಿಗಿಳಿದು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳು; ಸ್ನೇಹಿತರ ಕಣ್ಣಮುಂದೆಯೇ ನೀರುಪಾಲಾದರು!

death
ಸಾಂದರ್ಭಿಕ ಚಿತ್ರ
Published on

ಭದ್ರಾವತಿ: ತಾಲೂಕಿನ ಗೋಂದಿ ಚೆಕ್‌ಡ್ಯಾಂನಲ್ಲಿ ಶನಿವಾರ ಈಜಲು ತೆರಳಿದ್ದ ಶಿವಮೊಗ್ಗದ ಖಾಸಗಿ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಗ್ರಾಮದ ಶಶಾಂಕ್ (19) ಮತ್ತು ಶಿವಮೊಗ್ಗ ನಗರ ಮಂಜುನಾಥ ಬಡಾವಣೆಯ ಕಿರಣ್ (19) ಮೃತಪಟ್ಟವರು. ಶಿವಮೊಗ್ಗದಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ಇವರು ಶನಿವಾರ ಬೆಳಗ್ಗೆ ಭದ್ರಾ ಜಲಾಶಯ ನೋಡಲು ಸ್ನೇಹಿತರೊಂದಿಗೆ ಬಂದಿದ್ದರು.

ಬೈಕ್‌ನಲ್ಲಿ ಬಂದಿದ್ದ ವಿದ್ಯಾರ್ಥಿಗಳು ಭದ್ರಾ ಜಲಾಶಯ ವೀಕ್ಷಿಸಿದ ಬಳಿಕ ಗೋಂದಿ ಗ್ರಾಮ ಸಮೀಪದ ಚೆಕ್‌ಡ್ಯಾಂ ನೋಡಲು ತೆರಳಿದ್ದರು. ಅಲ್ಲಿಯೇ ಈಜಲು ನೀರಿಗೆ ಇಳಿದಿದ್ದರು. ದುರದೃಷ್ಟವೆಂದರೆ ಇಬ್ಬರಿಗೂ ಈಜಲು ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಚೆಕ್‌ಡ್ಯಾಂನಲ್ಲಿ ನೀರಿನ ಸೆಳೆತ ಹಾಗೂ ಆಳ ಗಮನಿಸದ ವಿದ್ಯಾರ್ಥಿಗಳು ಒಬ್ಬರ ಹಿಂದೆ ಒಬ್ಬರು ಇತರ ಸ್ನೇಹಿತರ ಕಣ್ಣೆದುರಿಗೇ ನೀರುಪಾಲಾಗಿದ್ದಾರೆ.

ಸ್ನೇಹಿತರು ನೀರು ಪಾಲಾಗುವುದನ್ನು ಕಂಡು ಉಳಿದವರು ಸಹಾಯಕ್ಕಾಗಿ ಕೂಗಿದ್ದನ್ನು ಕೇಳಿದ ಗ್ರಾಮಸ್ಥರು ನೆರವಿಗೆ ಧಾವಿಸಿದ್ದರೂ ಪ್ರಯೋಜನ ಆಗಲಿಲ್ಲ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತ ದೇಹಗಳನ್ನು ಹೊರತೆಗೆದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net