

ಹೊಸೂರು: ತಮಿಳುನಾಡಿನ ವೆಲಂಗಣಿ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಆಂಧ್ರಪ್ರದೇಶ ಮೂಲದ ಚಿರಾಗ್ ಸುರೇಶ್ (24) ಹಾಗೂ ಪ್ರವೀಣಾ (24) ಮೃತಪಟ್ಟವರು. ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ. ಅಂಚೆಗಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರಾಂತ್ಯದ ಮೋಜಿಗಾಗಿ ಹೊಗೇನಕಲ್ ಕಡೆಗೆ ಪ್ರವಾಸ ಹೊರಟಿದ್ದ ನಗರದ ಮೊಬಲಿಸಂ ಸಾಫ್ಟ್ವೇರ್ ಕಂಪನಿಯ 7 ಮಂದಿ ಐಟಿ ಉದ್ಯೋಗಿಗಳಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಚಿರಾಗ್ ಸುರೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪ್ರವೀಣಾ ಮೃತಪಟ್ಟಿದ್ದಾಳೆ.
ಜಾರ್ಕಂಡ್ ಮೂಲದ ಅನೂಪ್ ಕುಮಾರ್ (24), ರಿಶು ಕುಮಾರ್ (24), ಬಿಹಾರ ಮೂಲದ ಅಭಯ್ (24), ಆಂಧ್ರಪ್ರದೇಶ ಮೂಲದ ಸಯ್ಯದ್ ಅಮೀರ್ ಸಲ್ಮಾನ್ (24) ಹಾಗೂ ಮಣಿಕಂಠೇಶ್ವರ (33) ಪ್ರಾಣಾಪಾಯದಿಂದ ಪಾರಾಗಿದ್ದಾರೆ.