

ಶಿವಮೊಗ್ಗ: ದ್ರೋಹ, ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿ ಇಬ್ಬರಿಗೆ ಶಿವಮೊಗ್ಗದ 2ನೇ ಜೆಎಂಎಫ್‌ಸಿ ನ್ಯಾಯಾಲಯವು ತಲಾ 2 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 22 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ನಗರದ ಬೊಮ್ಮನಕಟ್ಟೆಯ ನಿವಾಸಿ ಜಯಮ್ಮ (67) ಮತ್ತು ಕೆ.ಆರ್.ಪುರಂ ವಂದನಾ ಟಾಕೀಸ್ ಸಮೀಪದ ನಿವಾಸಿ ಮಾರುತಿ (49) ಶಿಕ್ಷೆಗೆ ಒಳಗಾದವರು. 2018ನೇ ಸಾಲಿನಲ್ಲಿ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ದ್ರೋಹ, ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.
ಆಗಿನ ತನಿಖಾಧಿಕಾರಿ ಆಗಿದ್ದ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಜಿ.ದೇವರಾಜ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಶಾರದಾ ಕೊಪ್ಪದ ಅವರು ಇಬ್ಬರಿಗೂ ಸಾದಾ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕಿರಣ್‌ಕುಮಾರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.