

ಶಿವಮೊಗ್ಗ: ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿವಮೊಗ್ಗದ 5ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಹೊಸನಗರ ತಾಲೂಕು ಗರ್ತಿಕೆರೆಯ ಬಿದರಳ್ಳಿ ರಸ್ತೆ ನಿವಾಸಿಗಳಾದ ಫಯಾಜ್ ಅಲಿಯಾಸ್ ಕೋಳಿ ಫಯಾಜ್ (37) ಹಾಗೂ ಕೃಷ್ಣ (45) ಶಿಕ್ಷೆಗೊಳಗಾದವರು. ಇಬ್ಬರಿಗೂ ಜೀವಾವಧಿ ಶಿಕ್ಷೆಯ ಜತೆಗೆ ತಲಾ 13 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಜಿ.ಪ್ರಭಾವತಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಅಣ್ಣಪ್ಪ ನಾಯಕ್ ವಾದ ಮಂಡಿಸಿದ್ದರು.
2021ರ ಡಿಸೆಂಬರ್ 22ರ ರಾತ್ರಿ ಗರ್ತಿಕೆರೆ ನಿವಾಸಿ ಸತೀಶ್ ಶೆಟ್ಟಿ ಎಂಬುವವರು ಸ್ನೇಹಿತರಾದ ಕೋಳಿ ಫಯಾಜ್ ಹಾಗೂ ಕೃಷ್ಣ ಜತೆಗಿದ್ದರು. ಕೂಲಿ ಹಣ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಸತೀಶ್ ಶೆಟ್ಟಿ ಹಾಗೂ ಅಪರಾಧಿಗಳಿಬ್ಬರ ನಡುವೆ ಕಲಹ ನಡೆಯಿತು. ಇದು ವಿಕೋಪಕ್ಕೆ ತಿರುಗಿ ಅವರಿಬ್ಬರು ಸತೀಶ್ ಶೆಟ್ಟಿಯನ್ನು ಗ್ರಾಮದ ಕೆರೆ ದಂಡೆ ಸಮೀಪ ಕರೆದುಕೊಂಡು ಹೋಗಿ ಕತ್ತಿ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಕೆರೆಗೆ ಎಸೆದಿದ್ದರು.
ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕ ಮಧುಸೂದನ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.