

ತಿಪಟೂರು: ಹೈನುಗಾರಿಕೆ ಮೇಲೂ ಕರೊನಾ ಕರಿನೆರಳು ಬಿದ್ದಿದ್ದು, ನಷ್ಟ ಭರಿಸಲಾಗದೆ ಹೈರಾಣಾಗಿರುವ ತುಮಕೂರು ಹಾಲು ಒಕ್ಕೂಟ (ತುಮುಲ್) ಆ.16ರಿಂದ ರೈತರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ ಮತ್ತೆ 2 ರೂ., ಕಡಿತಗೊಳಿಸಿದೆ.
ಹೈನುಗಾರಿಕೆ ನಂಬಿ ಸಂಸಾರದ ನೊಗ ತೂಗಿಸುತ್ತಿರುವ ಕುಟುಂಬಗಳಿಗೆ ಕರೊನಾ ಭೀತಿ ಕಾಣಿಸಿಕೊಂಡ ಮಾರ್ಚ್‌ನಿಂದ
ಆಗಸ್ಟ್‌ವರೆಗೂ ಹಾಲು ಖರೀದಿ ಬೆಲೆಯನ್ನು ಮೂರು ಬಾರಿ ಕಡಿತಗೊಳಿಸಿದೆ. ಫೆಬ್ರವರಿಯಲ್ಲಿ ಪ್ರತೀ ಲೀಟರ್ ಹಾಲಿಗೆ 28.50 ರೂ., ನೀಡುತ್ತಿದ್ದ ತುಮುಲ್ ಮಾರ್ಚ್‌ನಲ್ಲಿ 1 ರೂ., ಇಳಿಕೆ ಮಾಡಿತು. ಏಪ್ರಿಲ್-ಮೇ ತಿಂಗಳಲ್ಲಿ ಮತ್ತೊಮ್ಮೆ 2.50 ರೂ. ಕಡಿತಗೊಳಿಸಿತು. ಆದರೂ, ನಷ್ಟ ಭರಿಸಲಾಗದೆ ಮತ್ತೆ ಆ.16ರಿಂದ 2 ರೂ., ಕಡಿಮೆ ಮಾಡಿದೆ.
5.50 ರೂ., ಕಡಿತ: ಕರೊನಾ ಕಾಲಿಟ್ಟ ನಂತರ ಈವರೆಗೆ ಹಂತ ಹಂತವಾಗಿ ಹಾಲಿನ ಖರೀದಿ ಬೆಲೆಯಲ್ಲಿ ಒಟ್ಟಾರೆ 5.50 ರೂ. ಇಳಿಕೆಯಾಗಿದ್ದು, ಫೆಬ್ರವರಿಯಲ್ಲಿ ಲೀಟರ್‌ಗೆ 28.50 ರೂ ಇದ್ದ ಹಾಲಿನ ಬೆಲೆ ಈಗ 23 ರೂ.,ಗೆ ಇಳಿದಿದೆ. ಬೇರೆ ಹಾಲು ಒಕ್ಕೂಟಗಳು ವಾರದ ಒಂದು ದಿನ ರಜೆ ಘೋಷಿಸಿದ್ದವು. ಆದರೆ, ತುಮುಲ್ ರಜೆ ಘೋಷಿಸದೆ ಹಾಲು ಖರೀದಿಸಿದೆ.
ಸದ್ಯಕ್ಕೆ ತುಮುಲ್‌ಗೆ ಪ್ರತಿನಿತ್ಯ 8.54 ಲಕ್ಷ ಲೀಟರ್ ಹಾಲು ಹರಿದುಬರುತ್ತಿದೆ. ಕರೊನಾಕ್ಕೆ ಮುಂಚೆ 2 ಲಕ್ಷ ಲೀಟರ್ ಮುಂಬೈಗೆ ರವಾನೆ ಮಾಡಲಾಗುತ್ತಿತ್ತು. ಈಗ 50 ಸಾವಿರ ಲೀಟರ್‌ಗೆ ಕುಸಿದಿದೆ. ಬೆಂಗಳೂರಿಗೆ 1.65 ಲಕ್ಷ ಲೀ., ಪೂರೈಸುತ್ತಿದ್ದು 1.5 ಲಕ್ಷ ಲೀ.,ಗೆ ತುಮಕೂರಿಗೆ 1.15 ಲಕ್ಷ ಲೀ.,ನಲ್ಲಿ 1 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ. ಹಾಗಾಗಿ, ಹಾಲು ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಉಳಿದ ಹಾಲನ್ನು ಪುಡಿ, ಬೆಣ್ಣೆ ತಯಾರಿಕೆಗೆ ಬಳಸಲಾಗುತ್ತಿದೆ. ಮಾರ್ಚ್ ನಿಂದ ಆಗಸ್ಟ್‌ವರೆಗೆ ತುಮಕೂರು ಹಾಲು ಒಕ್ಕೂಟವೊಂದೇ ಅಂದಾಜು 23 ಕೋಟಿ ನಷ್ಟ ಅನುಭವಿಸಿದ್ದು ದರ ಕಡಿತ ಅನಿವಾರ್ಯವೆನಿಸಿದೆ.
ಹಾಲು ಖರೀದಿ ದರ ಕಡಿತಗೊಳಿಸಲಾಗಿದೆ. ನಷ್ಟ ಸರಿದೂಗಿಸಲು ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಬೇಕಾಯಿತು. ಆದರೆ, ರಜೆ ಘೋಷಿಸಿಲ್ಲ. ಹಾಲಿನ ಬಟವಾಡೆ ಮಾಡಲು ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯಿಂದ ಶೇ.4ರ ಬಡ್ಡಿ ರಿಯಾಯಿತಿಯಲ್ಲಿ 28 ಕೋಟಿ ರೂ., ಸಾಲ ಪಡೆಯಲಾಗಿದೆ. ಹಾಲಿನ ಬೇಡಿಕೆ ಹೆಚ್ಚಾದಲ್ಲಿ ಮತ್ತೆ ದರ ಯಥಾಸ್ಥಿತಿಗೆ ಬರಲಿದೆ. ಸಿ.ವಿ.ಮಹಲಿಂಗಯ್ಯ, ಅಧ್ಯಕ್ಷ, ತುಮುಲ್ ಕರೊನಾದಿಂದಾಗಿ ತುಮುಲ್‌ಗೆ 23 ಕೋಟಿ ರೂ. ನಷ್ಟವಾಗಿದೆ. ರೈತರ ಸಭೆ ಕರೆದು ಪರಿಸ್ಥಿತಿ ವಿವರಿಸಿದ ನಂತರವೇ ಖರೀದಿ ದರ ಕಡಿಮೆ ಮಾಡಲಾಗಿದೆ. ಇಲ್ಲದಿದ್ದರೆ ವಾರದಲ್ಲಿ 2 ದಿನ ಹಾಲು ಖರೀದಿ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಮಾದಿಹಳ್ಳಿ ಪ್ರಕಾಶ್ ಕೆಎಂಎಫ್ ನಿರ್ದೇಶಕ ಸಂಕಷ್ಟದ ಸಂದರ್ಭದಲ್ಲಿ ಹಾಲಿನ ದರ ಕಡಿಮೆ ಮಾಡಿದರೆ ಹೈನುಗಾರಿಕೆಯನ್ನೇ ನಂಬಿರುವ ಕುಟುಂಬದ ಗತಿ ಏನು?. ಸರ್ಕಾರ ಏನು ಮಾಡುತ್ತೋ, ಬಿಡುತ್ತೋ ಗೊತ್ತಿಲ್ಲ. ಸಮಸ್ಯೆಗೆ ಪರ್ಯಾಯ ಮಾರ್ಗ ಕಂಡುಕೊಂಡು, ಹೈನುಗಾರಿಕೆ ನಂಬಿರುವ ಕುಟುಂಬಗಳಿಗೆ ನೆರವಾಗುವುದು ಸರ್ಕಾರದ ಕರ್ತವ್ಯ. ಎನ್.ಎಂ.ಸುರೇಶ್ ತಾಪಂ ಸದಸ್ಯ, ತಿಪಟೂರು