ಚಿಕನ್‌ ಸ್ಟಾಲ್‌ ಸಿಬ್ಬಂದಿಗೆ ಹಲ್ಲೆ; ಇಬ್ಬರು ರೌಡಿ ಶೀಟರ್‌ಗಳ ಬಂಧನ

IMG_20220411_122656
Published on

ಮಂಗಳೂರು: ನಗರದ ವೆಲೆನ್ಸಿಯಾ ಜಂಕ್ಷನ್‌ ಬಳಿಯ ಐಡಿಯಲ್‌ ಚಿಕನ್‌ಸ್ಟಾಲ್‌ ಸಿಬ್ಬಂದಿಗೆ ಕಲ್ಲು, ಹೆಲ್ಮೆಟ್‌ನಿಂದ ಹೊಡೆದು, ಚೂರಿಯಿಂದ ಬೆದರಿಸಿ, ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿದ ಇಬ್ಬರು ರೌಡಿ ಶೀಟರ್‌ ಗಳನ್ನು ಪಾಂಡೇಶ್ವರ ಠಾಣೆ ಪೊಲೀಸರು ಭಾನುವಾರ ಸಾಯಂಕಾಲ ವಶಕ್ಕೆ ಪಡೆದಿದ್ದಾರೆ.
ಬಜಾಲ್‌ ಜಲ್ಲಿಗುಡ್ಡೆ ನಿವಾಸಿ ಪ್ರೀತಮ್‌ ಯಾನೇ ಪ್ರೀತಮ್‌ ಪೂಜಾರಿ (27) ಮತ್ತು ಅಳಪೆ ಗಾಣಬೆಟ್ಟು ನಿವಾಸಿ ಧೀರಜ್‌ ಕುಮಾರ್‌ ಯಾನೇ ಧೀರು (25) ಬಂಧಿತರು.
ಚಿಕನ್‌ ಅಂಗಡಿಯ ಸಿಬ್ಬಂದಿಗಳಾದ ಸುನೀಲ್‌ ಮಾರ್ಡಿ, ಅನಂತ ಹಾಗೂ ಜೀವನ್‌ ಎನ್ನುವವರಿಗೆ ಹೊಡೆದು ಮಾರಣಾಂತಿಕ ಗಾಯ ಮಾಡಿದ್ದಾರೆ. ಚೂರಿಯಿಂದ ತಿವಿಯಲು ಹೋದಾಗ ಅಲ್ಲಿ ಸೇರಿದ್ದ ಸಾರ್ವಜನಿಕರು ತಡೆದಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ಸಾರ್ವಜನಿಕರಿಗೂ ಚೂರಿ ತೋರಿಸಿ, ಬೀಸಿ, ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ನಗರ ನಿಯಂತ್ರಣ ಕಚೇರಿಗೆ ಬಂದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಾಯದಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಇಬ್ಬರೂ ಮದ್ಯ ಸೇವಿಸಿರುವುದು ಹಾಗೂ ಪ್ರೀತಮ್‌ ಗಾಂಜಾ ಸೇವನೆ ಮಾಡಿರುವುದು ಕಂಡು ಬಂದಿದೆ.
ಆರೋಪಿ ಧೀರಜ್‌ ಮೇಲೆ ಮಂಗಳೂರು ನಗರ ದಕ್ಷಿಣ, ಪೂರ್ವ, ಗ್ರಾಮಾಂತರ ಠಾಣೆಗಳಲ್ಲಿ ಎರಡು ದರೋಡೆ, ಎರಡು ದರೋಡೆ ಸಂಚು, ಎರಡು ಕೊಲೆಯತ್ನ, ಹಲೆ ಸೇರಿ ಒಟ್ಟು 8 ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಪ್ರೀತಮ್‌ ಮೇಲೆ ಮಂಗಳೂರು ನಗರ ದಕ್ಷಿಣ, ಪೂರ್ವ, ಉತ್ತರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಎರಡು ದರೋಡೆ, ಮೂರು ಕೊಲೆಯತ್ನ, ಗಾಂಜಾ ಸೇವನೆಯ ಮೂರು ಪ್ರಕರಣ ಮತ್ತು ಹಲ್ಲೆ ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net