ಪಿಸಿಸಿ ನೀಡಿದ ಹಿನ್ನಲೆ ಬಜಪೆ ಠಾಣೆಯ ಇಬ್ಬರು ಪೊಲೀಸರ ಅಮಾನತು

   ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಮತ್ತು ಅವರ ಗಮನಕ್ಕೆ ಬಾರದಂತೆ ನಕಲಿ ದಾಖಲೆ ಸೃಷ್ಟಿಸಿ 31 ಅಸ್ಸಾಂ ಮತ್ತು ಬಿಹಾರ ಮೂಲದ ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್(ಪಿಸಿಸಿ) ನೀಡಿ ಕರ್ತವ್ಯ ಲೋಪ ಎಸಗಿದ ಬಜಪೆ ಠಾಣೆಯ ಇಬ್ಬರು ಪೊಲೀಸರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಶುಕ್ರವಾರ ಅಮಾನತು ಮಾಡಿದ್ದಾರೆ. ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.
ಬಜಪೆ ಠಾಣೆಯ ಮಹಿಳಾ ಸಿಬ್ಬಂದಿ ಆಶಾ ್ಲೇವಿಯಾ ಕುಟಿನ್ಹಾ ಮತ್ತು ಹೆಡ್ ಕಾನ್‌ಸ್ಟೇಬಲ್ ಕೊರಚರ ಮಂಜುನಾಥ್ ಅಮಾನತುಗೊಂಡವರು. ಮಂಜುನಾಥ್ ನೇರ ಭಾಗಿಯಾದ ಕಾರಣ ಬಂಧನವಾಗುವ ಸಾಧ್ಯತೆಯಿದೆ. ಉಳಿದಂತೆ ಆಶಾ ್ಲೇವಿಯಾ ಬಾಣಂತಿಯಾಗಿದ್ದು, ಅವರಿಗೆ ನೋಟೀಸು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮಧ್ಯವರ್ತಿ ಭರತ್ ಎಕ್ಕಾರ್ ಹಾಗೂ ಮೂಲತಃ ಪಶ್ಚಿಮ ಬಂಗಾಳ ಹಾಲಿ ಬಜಪೆ ಕೊಂಚಾರು ನಿವಾಸಿ ಆನಂದ್ ಬಿಸ್ವಾಸ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಮತಾ ಎನ್ನುವ ಮಹಿಳೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕಾಗಿ ಹೊರ ರಾಜ್ಯದ ಕಾರ್ಮಿಕರಿಂದ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಬಜಪೆ ಠಾಣೆಗೆ ಒಟ್ಟು 33 ಅರ್ಜಿಗಳು ಬಂದಿದ್ದವು. ಜೂ.17ರಂದು ಬಜಪೆ ಠಾಣಾಧಿಕಾರಿ ಬಾಲಕೃಷ್ಣ ಎಚ್.ಎನ್. ಮತ್ತು ಠಾಣಾ ಬರಹಗಾರ ಚಿನ್ನಪ್ಪ ಅವರು ಪೊಲೀಸ್ ಐಟಿಯಲ್ಲಿ ವೆರಿಫಿಕೇಶನ್ ರಿಜಿಸ್ಟರ್ ಪರಿಶೀಲಿಸುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಜೂ.9ರಂದು ಠಾಣೆಯಲ್ಲಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಾಗಿ ಸ್ವೀಕೃತವಾಗಿದ್ದ 33 ಅರ್ಜಿಗಳ ಪೈಕಿ 31 ಅರ್ಜಿಗಳನ್ನು ಪ್ರಿಂಟ್ ತೆಗೆದು ರಿಜಿಸ್ಟರ್ ನಲ್ಲಿ ನಮೂದಿಸದೆ ಕೇವಲ 2 ಅರ್ಜಿಗಳನ್ನು ಮಾತ್ರ ನಮೂದಿಸಿರುವುದು ಮತ್ತು 31 ಅರ್ಜಿಗಳನ್ನು ಕೂಡಾ ನೇರವಾಗಿ ವಿಲೇವಾರಿ ಮಾಡಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಸಂಶಯ ಬಂದು ಅರ್ಜಿದಾರರ ಪೈಕಿ ಶಿವರಾಜ್ ತಳವಾರ ಎಂಬವರಿಗೆ ಕರೆ ಮಾಡಿ ವಿಚಾರಿಸಿದಾಗ ತನ್ನ ಆಧಾರ್ ಕಾರ್ಡ್, ವಾಸ್ತವ್ಯದ ಕರಾರು ಪತ್ರಗಳನ್ನು ಕಾಟಿಪಳ್ಳದ ಕೈಕಂಬದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಮಮತಾ ಎಂಬವರಿಗೆ ನೀಡಿದ್ದೇನೆ. ಅವರು ಎಕ್ಕಾರಿನ ಭರತ್ ಗೆ ನೀಡಿದ್ದು, ಅವರ ಮೂಲಕ ಯಾರೋ ಪೊಲೀಸರು ಪಿಸಿಸಿ ಯನ್ನು ಮಾಡಿಕೊಟ್ಟಿದ್ದಾರೆ. ಪಿಸಿಸಿ ಯ ವಿಚಾರಣೆಗೆ ಠಾಣೆಗೆ ಹಾಜರಾಗಿಲ್ಲ. ಭರತ್ ಮತ್ತು ಮಮತಾ ಅದನ್ನು ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾನೆ.
ಬಳಿಕ ಠಾಣೆಯ ಐಟಿಯಲ್ಲಿ ಪರಿಶೀಲಿಸಿದಾಗ, ಪಿಸಿಸಿ ಅರ್ಜಿಯನ್ನು ವಿಚಾರಣೆ ನಡೆಸದೆ, ಸಾಕ್ಷಿದಾರರನ್ನು ವಿಚಾರಿಸದೆ, ಹೇಳಿಕೆ ಪಡೆಯದೆ, ಅರ್ಜಿದಾರರ ವಾಸ್ತವ್ಯದ ಬಗ್ಗೆ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ, ಅರ್ಜಿದಾರರನ್ನು ಠಾಣಾಧಿಕಾರಿ ಮುಂದೆ ಹಾಜರು ಪಡಿಸದೆ, ಅರ್ಜಿಗಳಗೆ ಠಾಣಾಧಿಕಾರಿಯ ಸಹಿ ಪಡೆಯದೆ ವಿಲೇವಾರಿ ಮಾಡಿರುವುದು ತಿಳಿದು ಬಂದಿದೆ. ಜೂ. 10 ಮತ್ತು 12ರಂದು ಠಾಣಾಧಿಕಾರಿಯ ಕೆಜಿಐಡಿ ಮತ್ತು ಠಾಣಾ ಪಾಸ್ ವರ್ಡ್ ನ್ನು ದುರುಪಯೋಗ ಪಡಿಸಿ, ಪೊಲೀಸ್ ಐಟಿಗೆ ಲಾಗಿನ್ ಆಗಿ 31 ಅರ್ಜಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಪ್ ಲೋಡ್ ಮಾಡಿಕೊಂಡು ಪ್ರಮಾಣಪತ್ರ ತಯಾರಿಸಿ, ಇಲಾಖಾ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಠಾಣಾಧಿಕಾರಿ ಬಾಲಕೃಷ್ಣ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಕರ್ತವ್ಯ ಲೋಪ, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪಿಸಿಸಿ ಉದ್ದೇಶ
ಕೆಲವೊಂದು ಕಂಪೆನಿಗಳಲ್ಲಿ ಕೆಲಸಕ್ಕೆ ಸೇರುವಾಗ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ಕೇಳುತ್ತಾರೆ. ಕಾರ್ಮಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸ್ವೀಕಾರವಾಗುತ್ತದೆ. ಬಳಿಕ ಪೊಲೀಸರು ಕಾರ್ಮಿಕರು ವಾಸವಿರುವ ಸ್ಥಳಕ್ಕೆ ತೆರಳಿ ನೆರೆಹೊರೆಯವರನ್ನು ವಿಚಾರಿಸಿ, ವಾಸವಿರುವ ಬಗ್ಗೆ ಹಾಗೂ ಇತರ ಮಾಹಿತಿ ಪಡೆದು ಅರ್ಜಿದಾರರ ಮೇಲೆ ಯಾವುದಾದರೂ ಪ್ರಕರಣ ದಾಖಲಾಗಿದೆಯೇ, ಊರಿನಲ್ಲಿ ಅವರ ಗುಣ ನಡತೆ ಸರಿ ಇದೆಯೇ ಎಂಬುದನ್ನು ಪರಿಶೀಲಿಸಿ ಎಲ್ಲವೂ ಸರಿ ಇದ್ದಲ್ಲಿ ಪೊಲೀಸ್ ಕ್ಲಿಯರೆನ್ಸ್ ಪತ್ರಗಳನ್ನು ಒದಗಿಸಲಾಗುತ್ತದೆ. ಬಳಿಕ ಆನ್ ಲೈನ್ ನಲ್ಲೇ ಪ್ರಮಾಣಪತ್ರ ಪಡೆಯಬಹುದಾಗಿದೆ. ಪೊಲೀಸ್ ಪರಿಶೀಲನೆಗೆ ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net