

ಮೈಸೂರು: ರಾಮಕೃಷ್ಣನಗರದ ನಟನ ರಂಗ ಮಂದಿರದಲ್ಲಿ ವಾರಾಂತ್ಯಕ್ಕೆ ಎರಡು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಫೆ.3 ರಂದು ಸಂಜೆ 6.30ಕ್ಕೆ ‘ಕನ್ನಡ ಕಾವ್ಯಕಣಜ’ ಹಾಗೂ ಫೆ.4 ರಂದು ಸಂಜೆ. 6.30ಕ್ಕೆ ‘ನೀ ಒಥೆಲೋವಾದರೆ, ನಾ ಇಯಾಗೊ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
‘ಕನ್ನಡ ಕಾವ್ಯಕಣಜ’ ನಟನ ರಂಗಶಾಲೆಯಲ್ಲಿ 2023-24ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಎರಡನೇ ಅಭ್ಯಾಸಿ ಪ್ರಯೋಗವಾಗಿದೆ. ನಾಟಕದ ರಂಗಪಠ್ಯ, ಸಂಗೀತ, ನಿರ್ದೇಶನ ಜವಾಬ್ದಾರಿಯನ್ನು ರಂಗಕರ್ಮಿ ಡಾ.ಶ್ರೀಪಾದ ಭಟ್ ಹೊತ್ತಿದ್ದಾರೆ.
ನಾಟಕದಲ್ಲಿ ಆದರ್ಶ ಮನುಷ್ಯರ ಹುಡುಕಾಟವಿದೆ. ಸಂಬಂಧಗಳ ವಿವಿಧ ಸ್ವರೂಪಗಳ ಅನ್ವೇಷಣೆಯಿದೆ. ವರ್ಣ, ವರ್ಗ, ಲಿಂಗ ತಾರತಮ್ಯಗಳ ಸ್ವರೂಪ ಕಾರಣಗಳ ಹುಡುಕಾಟದ ಪ್ರಯತ್ನವೂ ಇಲ್ಲಿದೆ. ಕಾವ್ಯಗಳನ್ನು ರಂಗದ ಮೇಲೆ ಪ್ರಯೋಗಿಸಬಹುದಾದ ಹಲವು ಮಾದರಿಗಳ ಪ್ರಸ್ತುತಿಯೂ ಇಲ್ಲಿದೆ.
‘ನೀ ಒಥೆಲೋವಾದರೆ, ನಾ ಇಯಾಗೊ’ ನಾಟಕವನ್ನು ಎನ್.ಸಿ. ಮಹೇಶ್ ನಿರ್ದೇಶಿಸಿದ್ದಾರೆ. ಇದು ಶೇಕ್ಸ್‌ಪಿಯರ್‌ನ ಒಥೆಲೋ ನಾಟಕದ ರೂಪಾಂತರ. ಒಂದರ್ಥದಲ್ಲಿ ಸಮಕಾಲೀನ ರೂಪ. ಮೂಲ ನಾಟಕದಲ್ಲಿನ ರಾಜಪ್ರಭುತ್ವ ಮತ್ತು ಯುದ್ಧ, ಹೋರಾಟಗಳು ಈ ನಾಟಕದಲ್ಲಿ ಇಂದಿನ ವಿದ್ಯಮಾನದ ಪರ್ಯಾಯ ರೂಪಗಳನ್ನು ಪಡೆದುಕೊಂಡಿದೆ. ಮೂಲ ಕಥೆಯ ಚೌಕಟ್ಟಿನ ಒಳಗೆ ಇಂದಿನ ಬದುಕಿನ ಗತಿಯನ್ನು ಚಿತ್ರಿಸಲಾಗಿದೆ.