ಅಪಘಾತದಲ್ಲಿ ಕುಂಭಮೇಳಕ್ಕೆ ತೆರಳಿದ್ದ ಇಬ್ಬರು ಸಾವು

Published on

ಮೈಸೂರು: ಮಹಾಕುಂಭಮೇಳದಿಂದ ಮರಳುವಾಗ ಉತ್ತರ ಪ್ರದೇಶದ ಮಿರ್ಜಾಪುರದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಹಾಗೂ ಶ್ರೀರಂಗಪಟ್ಟಣದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಮೈಸೂರು ತಾಲೂಕಿನ ಮರಟೀಕ್ಯಾತನಹಳ್ಳಿ ಅರುಣ್ ಶಾಸ್ತ್ರಿ (33), ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ನಿವಾಸಿ ರಾಮಕೃಷ್ಣ ಶರ್ಮ(31)ಮೃತರು. ಕಾರಿನಲ್ಲಿದ್ದ ಮತ್ತೊಬ್ಬ ಯುವಕ ಮೋಹನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಜ.21ರಂದು ತೆರಳಿ ಪುಣ್ಯ ಸ್ನಾನ ಮುಗಿಸಿದ ನಂತರ ಭಾನುವಾರ ವಾರಾಣಸಿಗೆ ತೆರಳುತ್ತಿದ್ದರು. ಈ ವೇಳೆ ಮಿರ್ಜಾಪುರದ ಬಳಿ ಕಾರು ಹಾಗೂ ಲಾರಿ ನಡುವೆ ಅಪಘಾತವಾಗಿದೆ. ಈ ಸಂದರ್ಭ ರಾಮಕೃಷ್ಣ ಶರ್ಮ ಮತ್ತು ಅರುಣ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಇವರನ್ನು ದಾಖಲಿಸಿದ ರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾಮಕೃಷ್ಣ, ಬುಧವಾರ ಅರುಣ್ ಶಾಸ್ತ್ರಿ ಮೃತಪಟ್ಟರು.

ಅವಿವಾಹಿತರಾಗಿದ್ದ ರಾಮಕೃಷ್ಣ ಶರ್ಮ ಅವರು ಕೆಆರ್‌ಎಸ್ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು. ಅರುಣ್ ಶಾಸ್ತ್ರಿ ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು. ಮಿರ್ಜಾಪುರಕ್ಕೆ ಧಾವಿಸಿದ ಕುಟುಂಬಸ್ಥರು ಅಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net