ಕಾಡಾನೆ ದಾಳಿಯಿಂದ ಇಬ್ಬರು ಪಾರು

ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕಾಡಾನೆ ದಾಳಿಗೆ ನೆಲಕಚ್ಚಿರುವ ಮನೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕಾಡಾನೆ ದಾಳಿಗೆ ನೆಲಕಚ್ಚಿರುವ ಮನೆ.
Published on

ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಲ್ಲಿ ಕಾಡಾನೆ ಮನೆ ಮೇಲೆ ದಾಳಿ ನಡೆಸಿದ್ದು, ಇಬ್ಬರು ವ್ಯಕ್ತಿಗಳು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಂಚಿನಲ್ಲಿರುವ ಗ್ರಾಮದ ಬೆಳ್ಳಪ್ಪ ಅವರ ಜಮೀನಿಗೆ ಮಂಗಳವಾರ ಮಧ್ಯ ರಾತ್ರಿ ಒಂಟಿ ಆನೆ ನುಗ್ಗಿದೆ. ಬಂಡೀಪುರದ ಸಫಾರಿ ಟಿಕೆಟ್ ಕೌಂಟರ್ ಸಮೀಪದ ಜಮೀನಿನಲ್ಲಿ ಬೆಳೆದಿದ್ದ ಫಸಲನ್ನು ತುಳಿದು ನಾಶಪಡಿಸಿದೆ. ಈ ವೇಳೆ ಜಮೀನಿನ ಮನೆಯಲ್ಲಿ ಮಲಗಿದ್ದ ವಿಶ್ವ ಹಾಗೂ ಮತ್ತೊಬ್ಬರು ಎಚ್ಚರಗೊಂಡರು. ಅಷ್ಟರಲ್ಲಿ ಆನೆ ವನೆಯ ಮೇಲೆ ದಾಳಿ ನಡೆಸಿ ಕೆಡವಿ ಹಾಕಿದೆ. ಮನೆಯಲ್ಲಿ ಸಂಗ್ರಹಿಸಿದ್ದ ಅಕ್ಕಿ ಬೆಲ್ಲ ಮುಂತಾದ ಆಹಾರ ಪದಾರ್ಥಗಳನ್ನು ತಿಂದುಹಾಕಿದೆ. ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಇಬ್ಬರೂ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾರೆ.

ಒಂದು ವಾರದಿಂದ ಒಂಟಿ ಆನೆ ದಾಳಿ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ರಾತ್ರಿ ವೇಳೆ ತಮ್ಮ ಫಸಲಿನ ಕಾವಲಿಗೆ ಜಮೀನುಗಳಿಗೆ ಹೋಗಲು ರೈತರು ಭಯಪಡುವಂತಾಗಿದೆ. ಇನ್ನಾದರೂ ಅರಣ್ಯಾಧಿಕಾರಿಗಳು ಎಚ್ಚೆತ್ತು ಆನೆಯನ್ನು ದೂರಕ್ಕೆ ಅಟ್ಟಲು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ರೈತ ಮುಖಂಡ ಹಂಗಳ ಮಾಧು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net