ನೀರಲ್ಲಿ ಮುಳುಗಿ ಇಬ್ಬರು ಮೃತ್ಯು

drowning
Published on


ಕಾಸರಗೋಡು:
ಆದೂರಿನಲ್ಲಿ ಸ್ನಾನಕ್ಕೆಂದು ಹೊಳೆಗಿಳಿದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದರೆ, ಅಡೂರು ಚರ್ಲಕೈ ಬಳಿ ಹೊಳೆಯಲ್ಲಿ ತೇಲಿಬರುತ್ತಿದ್ದ ತೆಂಗಿನಕಾಯಿ ಹಿಡಿಯಲೆತ್ನಿಸಿದ ಮಹಿಳೆ ಆಯತಪ್ಪಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದು,ಅತ್ತನಾಡಿ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ.

ಆದೂರು ಠಾಣೆ ವ್ಯಾಪ್ತಿಯ ಪಳ್ಳಂ ಚುಕ್ಕುವಳಪ್ಪು ನಿವಾಸಿ ಮಹಮ್ಮದ್‌ಕುಞಿ ಎಂಬುವರ ಪುತ್ರ ಮುಸಾಮ್ಮಿಲ್(14) ಹಾಗೂ ಚರ್ಲಕೈ ನಿವಾಸಿ ಕೆ. ರಾಕೋಜಿ ರಾವ್ ಎಂಬುವರ ಪತ್ನಿ ಜಲಜಾಕ್ಷಿ(75)ಮೃತಪಟ್ಟವರು.
ಮುಸಾಮ್ಮಿಲ್ ಆದೂರು ಸರ್ಕಾರಿ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ.ಬುಧವಾರ ಮನೆಯಿಂದ ಶಾಲೆಗೆಂದು ತೆರಳಿದ್ದು, ಸಂಜೆ ವಾಪಸಾಗದ ಹಿನ್ನೆಲೆಯಲ್ಲಿ ವಿಚಾರಿಸಿದಾಗ ತರಗತಿಗೆ ಹಾಜರಾಗಿರಲಿಲ್ಲ ಎಂದು ತಿಳಿದು ಬಂದಿತ್ತು.

ಆತನ ಸಹಪಾಠಿಯನ್ನು ವಿಚಾರಿಸಿದಾಗ ಆದೂರು ಸೇತುವೆ ಸನಿಹದ ಹೊಳೆಗೆ ಸ್ನಾನಕ್ಕೆ ತೆರಳುವುದಾಗಿ ತಿಳಿಸಿದ್ದನೆನ್ನಲಾಗಿದೆ. ಸಹಪಾಠಿ ನೀಡಿದ್ದ ಮಾಹಿತಿಯನ್ವಯ ಹೊಳೆಬದಿ ತಪಾಸಣೆ ನಡೆಸಿದಾಗ ಬಾಲಕನ ಅಂಗಿ ಮತ್ತು ಚಪ್ಪಲಿ ಪತ್ತೆಯಾಗಿತ್ತು. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಊರವರು ಸೇರಿ ಹುಡುಕಾಡಿದಾಗ ಅನತಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬುಧವಾರ ಮಧ್ಯಾಹ್ನ ಮನೆ ಸನಿಹದ ಪಯಸ್ವಿನಿ ಹೊಳೆಯಲ್ಲಿ ತೇಲಿ ಬರುತ್ತಿದ್ದ ತೆಂಗಿನಕಾಯಿ ಹಿಡಿಯಲು ಪ್ರಯತ್ನಿಸಿದ ಜಲಜಾಕ್ಷಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಬಹಳ ಹೊತ್ತಿನವರೆಗೂ ಜಲಜಾಕ್ಷಿ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ನೆರವಿನಿಂದ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net