ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು

20 mlv 1
ಅಪಘಾತಕ್ಕೆ ಕಾರಣವಾದ ಲಾರಿ ವಶಕ್ಕೆ ಪಡೆದಿರುವುದು.
Published on

ಮಳವಳ್ಳಿ: ತಾಲೂಕಿನಲ್ಲಿ ಭಾನುವಾರ ಸಂಜೆ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಮೈಸೂರು ಮುಖ್ಯರಸ್ತೆಯ ಹುಚ್ಚನದೊಡ್ಡಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.

ತಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಅವರ ಪತ್ನಿ ರಾಜಮ್ಮ(50) ಮೃತರು. ಇವರು ವಿವಾಹ ಸಮಾರಂಭಕ್ಕೆ ಹೋಗಲು ಪಟ್ಟಣಕ್ಕೆ ಬಂದಿದ್ದರು. ಲಾರಿ ಬರುವುದನ್ನು ಗಮನಿಸದೆ ದಿಢೀರ್ ರಸ್ತೆ ದಾಟಲು ಮುಂದಾದಾಗ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಪಟ್ಟಣದ ಸಾರ್ವಜನಿಕ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಒಪ್ಪಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.

ಪಾದಚಾರಿ ಸಾವು: ತಾಲೂಕಿನ ಹಾಡ್ಲಿ ಸಮೀಪದ ಬಸವನಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಖಾಸಗಿ ಬಸ್ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಸವನಪುರ ಗ್ರಾಮದ ರಾಜು (55) ಮೃತರು. ಇವರು ರಸ್ತೆ ಬದಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಮಳವಳ್ಳಿ ಪಟ್ಟಣದಿಂದ ಹಲಗೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಸೋಮವಾರ ಮರಣೊತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ಒಪ್ಪಿಸಲಾಯಿತು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net