

ಮಂಡ್ಯ: ನಗರದ ಹೊರವಲಯದ ಖಾಸಗಿ ಆಸ್ಪತ್ರೆ ಸಮೀಪ ಗುರುವಾರ ಮಧ್ಯಾಹ್ನ ಕಾರು ಡಿಕ್ಕಿ ಹೊಡೆದು ಬೈಕ್‌ನಲ್ಲಿ ಸಂಚರಿಸುತ್ತಿದ್ದ ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟಿದ್ದಾರೆ. ಅಂತೆಯೇ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಈ ನಡುವೆ ಅಪಘಾತದ ವೇಳೆ ಕಾರಿನ ಕೆಳಗೆ ಸಿಲುಕಿದ ಯುವಕನ್ನು ಸುಮಾರು 250 ಮೀಟರ್‌ನಲ್ಲಿ ಎಳೆದೊಯ್ದು ಚಾಲಕ ಅಮಾನವೀಯವಾಗಿ ವರ್ತಿಸಿದ್ದಾನೆ.
ತಾಲೂಕಿನ ಹೊಸಬೂದನೂರು ಗ್ರಾಮದ ನಿವಾಸಿ ಚಿನ್ನಮ್ಮ(68) ಮತ್ತು ಈಕೆಯ ಮೊಮ್ಮಗ ಬಿ.ಎಂ.ರಾಜೀವ(17) ಮೃತರು. ಈತನ ಸ್ನೇಹಿತ ಕಟ್ಟೇದೊಡ್ಡಿ ಗ್ರಾಮದ ನೇಮಿಚಂದ(17) ಗಾಯಗೊಂಡಿದ್ದು, ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮೂವರು ಬೈಕ್‌ನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮಂಡ್ಯ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಸ್ಯಾಂಟ್ರೋ ಕಾರು ಡಿಕ್ಕಿಯಾಗಿದೆ. ಈ ವೇಳೆ ರಾಜೀವ ಕಾರಿನ ಮುಂಭಾಗಕ್ಕೆ ಸಿಲುಕಿದ್ದಾನೆ. ಆಗ ಕಾರು ಚಾಲಕ ವಾಹನವನ್ನು ನಿಲ್ಲಿಸದೆ ಎಳೆದುಕೊಂಡು ಹೋಗಿದ್ದಾನೆ.
ಮಾತ್ರವಲ್ಲದೆ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ. ರಾಜೀವನ ದೇಹ ಕಾರಿನಿಂದ ಪಕ್ಕಕ್ಕೆ ಬಿದ್ದ ಬಳಿಕ ವೇಗವನ್ನು ಹೆಚ್ಚಿಸಿದ್ದಾನೆ. ಈ ಸಂದರ್ಭದಲ್ಲಿ ಹಿಂದಿನ ಬರುತ್ತಿದ್ದ ಮತ್ತೊಂದು ಕಾರಿನವರು ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾರೆ. ಜತೆಗೆ ಅಪಘಾತಕ್ಕೆ ಕಾರಣವಾದ ಕಾರನ್ನು ಹಿಡಿಯುವ ಸಲುವಾಗಿ ನಗರದ ಫ್ಯಾಕ್ಟರಿ ವೃತ್ತದವರೆಗೂ ಹಿಂಬಾಲಿಸಿದ್ದಾರೆ. ಆದರೆ, ಚಾಲಕ ಗುತ್ತಲು ರಸ್ತೆಗೆ ಕಾರು ತಿರುಗಿಸಿ ವಾಹನಗಳ ದಟ್ಟಣೆ ನಡುವೆ ನಾಪತ್ತೆಯಾಗಿದ್ದಾನೆ. ವೀಡಿಯೋ ಮೂಲಕ ಕಾರಿನ ನಂಬರ್‌ನ್ನು ತಿಳಿದು ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಾನ್ವಿತವಂತನ ದುರಂತ ಅಂತ್ಯ
ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ರಾಜೀವ ಪ್ರತಿಭಾನ್ವಿತ ವಿದ್ಯಾರ್ಥಿ. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96ರಷ್ಟು ಅಂಕ ಗಳಿಸಿದ್ದನು. ಪ್ರಸ್ತುತ ನಗರದ ಅಭಿನವ ಭಾರತಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಈತ ಸ್ಥಳದಲ್ಲಿಯೇ ಮೃತಪಟ್ಟರೆ, ಅಜ್ಜಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಿದರೂ ಚಿಕಿತ್ಸೆ ಲಿಸಲಿಲ್ಲ. ಇಬ್ಬರನ್ನು ಕಳೆದುಕೊಂಡ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದೆ.