ವೈ.ಎನ್.ಹೊಸಕೋಟೆ: ಪಾವಗಡ ತಾಲೂಕಿನ ಓಬಳಾಪುರ ಗ್ರಾಮದ ಸಮೀಪ ಬೈಕ್ ಮತ್ತು ಜಲ್ಲಿ ತುಂಬಿದ ಟ್ರ್ಯಾಕ್ಟರ್ ಶುಕ್ರವಾರ ಸಂಜೆ ಅಪಘಾತಕ್ಕೀಡಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಓಬಳಾಪುರದ ಗೋವಿಂದಪ್ಪ(40) ಮೃತ. ಗೋವಿಂದಪ್ಪ ಶುಕ್ರವಾರ ಸಂಜೆ ಲಿಂಗದಹಳ್ಳಿಯಿಂದ ಸ್ವಗ್ರಾಮಕ್ಕೆ ಬರುತ್ತಿದ್ದ ವೇಳೆ ಓಬಳಾಪುರ ಗುಟ್ಟೆಯ ಸಮೀಪ ಹನುಮಂತನಹಳ್ಳಿಯಿಂದ ಜಲ್ಲಿ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ವೈ.ಎನ್.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಗೋವಿಂದಪ್ಪನಿಗೆ ಪತ್ನಿ, ಹೆಣ್ಣು ಮಗು ಇದೆ.
ತುರುವೇಕೆರೆ: ತಾಲೂಕಿನ ಮಾಯಸಂದ್ರ&ಜೋಡಗಟ್ಟೆ ಬಳಿ ಕ್ಯಾಂಟರ್ ಮತ್ತು ದ್ವಿಚಕ್ರ ವಾಹನದ ಮಧ್ಯೆ ಶುಕ್ರವಾರ ಅಪಘಾತ ಸಂಭವಿಸಿದ್ದು, ಗೃಹಿಣಿ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ತಾಲೂಕಿನ ಭೈತರಹೊಸಳ್ಳಿ ಗ್ರಾಪಂನ ಕಂಪ್ಯೂಟರ್ ಆಪರೇಟರ್ ಲೀಲಾವತಿ(30) ಮೃತೆ. ಲೀಲಾವತಿ ಡಿಎನ್ಪುರಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಬೆಳ್ಳೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಡಿಕ್ಕಿ ರಭಸಕ್ಕೆ ಸ್ಕೂಟಿ ಹಲವು ಮೀಟರ್ ದೂರ ಬಿದ್ದಿದ್ದು, ಲೀಲಾವತಿ ದೇಹ ಸಂಪೂರ್ಣ ಜಜ್ಜಿ ಹೋಗಿತ್ತು. ಅಪಘಾತ ಬಳಿಕ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಮೃತ ಲೀಲಾವತಿಗೆ ಪತಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.