

ಬೆಂಗಳೂರು: ಕಾಮಗಾರಿ ಹಂತದಲ್ಲಿದ್ದ ಕಟ್ಟಡ ಕುಸಿತಕ್ಕೀಡಾದ್ದರಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ನಿರ್ಮಾಣ ನಡೆಯುತ್ತಿದ್ದ ಸಂದರ್ಭ ಸಂಭವಿಸಿದ ಈ ದುರಂತದಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ.
ಮಾರತಹಳ್ಳಿ ಸಮೀಪದ ದೇವರಬೀಸನಹಳ್ಳಿ ಬಳಿ ವಜ್ರಂ ಕನ್ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ. ಇದರಲ್ಲಿ ಕೊಪ್ಪಳ ಮೂಲದ ಭೀಮಣ್ಣ(37), ಜಂಬಣ್ಣ (40) ಮೃತಪಟ್ಟಿದ್ದು, ಇನ್ನೊಬ್ಬ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ.
ದುರಂತ ಸಂಭವಿಸುವ ಸಂದರ್ಭದಲ್ಲಿ ಒಟ್ಟು ಆರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆ ಪೈಕಿ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬನಿಗೆ ತೀವ್ರ ಗಾಯಗಳಾಗಿವೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.