

ಜಗಳೂರು: ತಾಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮ ಸಮೀಪದ ಕೃಷಿ ಹೊಂಡದ ಮೇಲೆ ಆಟವಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಸೋಮವಾರ ಸಂಜೆ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಅಸಗೋಡು ವಡ್ಡರಹಟ್ಟಿ ಸರ್ಕಾರಿ ಶಾಲೆಯ ತನುಶ್ರೀ (11), ಗಂಗೋತ್ರಿ (10) ಮೃತರು. ಗಂಗೋತ್ರಿ, ತನುಶ್ರೀ, ಖುಷಿ ಸೇರಿ ನಾಲ್ವರು ವಿದ್ಯಾರ್ಥಿನಿಯರು ಶಾಲೆ ಮುಗಿದ ನಂತರ ಮನೆಗೆ ತೆರಳುತ್ತಿದ್ದರು. ಮಾರ್ಗ ಮಧ್ಯದ ಕೃಷಿ ಹೊಂಡದಲ್ಲಿದ್ದ ನೀರು ಕಂಡು ಆಟವಾಡುತ್ತ ತೆರಳಿದ್ದಾರೆ. ಒಬ್ಬ ವಿದ್ಯಾರ್ಥಿನಿ ಕಾಲು ಜಾರಿ ಬಿದ್ದಿದ್ದು, ಸಹಾಯಕ್ಕೆ ಉಳಿದ ಮೂವರು ಧುಮುಕಿದ್ದಾರೆ. ಆದರೆ, ಬಿದ್ದ ರಭಸಕ್ಕೆ ಗಾಬರಿಗೊಂಡು ನೀರು ಕುಡಿದು ಉಸಿರುಗಟ್ಟಿದ್ದಾರೆ.
ಇನ್ನೊಬ್ಬ ವಿದ್ಯಾರ್ಥಿನಿ ಗ್ರಾಮಕ್ಕೆ ಹೋಗಿ ಮಾಹಿತಿ ತಿಳಿಸಿದಾಗ ಓಡಿ ಬಂದು ಮೇಲೆ ಎತ್ತುವಷ್ಟರಲ್ಲೇ ಇಬ್ಬರ ಜೀವ ಹೋಗಿತ್ತು. ಇನ್ನೊಬ್ಬ ವಿದ್ಯಾರ್ಥಿನಿ ಅಸ್ವಸ್ಥಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆಯಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಮೌನ ಆವರಿಸಿದೆ.
ತಂತಿ ಬೇಲಿ ನಿರ್ಮಿಸಿ, ಪ್ರಾಣ ಹಾನಿ ತಪ್ಪಿಸಿ: ಗ್ರಾಮೀಣ ಪ್ರದೇಶಗಳಲ್ಲಿ ರೈತರು ನಿರ್ಮಿಸಿಕೊಳ್ಳುವ ಕೃಷಿ ಹೊಂಡದಲ್ಲಿ ಯಾವುದೇ ಅವಘಡ ಹಾಗೂ ಪ್ರಾಣ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಗಳೂರು ಕೃಷಿ ಸಹಾಯಕ ನಿರ್ದೇಶಕಿ ಎಚ್. ಶ್ವೇತಾ ತಿಳಿಸಿದ್ದಾರೆ.
ಕೃಷಿ, ತೋಟಗಾರಿಕಾ ಇಲಾಖೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಮತ್ತಿತರ ಯೋಜನೆಗಳಡಿ ನಿರ್ಮಿಸಿಕೊಳ್ಳುವ ಕೃಷಿ ಹೊಂಡದಲ್ಲಿ ಜಾನುವಾರುಗಳು ಮತ್ತು ಮಕ್ಕಳು, ಜನರು ಆಕಸ್ಮಿಕವಾಗಿ ಬಿದ್ದು ಸಾವು-ನೋವು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು.
ಇದಕ್ಕಾಗಿ ಕಡ್ಡಾಯವಾಗಿ ಕೃಷಿ ಹೊಂಡದ ಸುತ್ತ ತಂತಿ ಬೇಲಿ ಅಳವಡಿಸಿಕೊಳ್ಳಬೇಕು. ಭೂ ಮಾಲೀಕರನ್ನು ಬಿಟ್ಟರೆ ಮಕ್ಕಳು ಹಾಗೂ ವೃದ್ದರಿಗೆ ಪ್ರವೇಶ ನಿರ್ಬಂಧಿಸಬೇಕು. ಕೃಷಿ ಹೊಂಡಲ್ಲಿ ಈಜಾಡುವುದು, ಜಾನುವಾರುಗಳಿಗೆ ನೀರು ಕುಡಿಸುವುದು, ಬಟ್ಟೆ, ಪಾತ್ರೆ ತೊಳೆಯುವುದು ಮತ್ತಿತರ ಕೃಷಿಯೇತರ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಇದರಿಂದ ಜನರಿಗೂ ಒಳ್ಳೆಯದಾಗಿದೆ. ಆದರೆ, ಇತ್ತೀಚೆಗೆ ಚಿಕ್ಕ ಮಕ್ಕಳು ಹೊಂಡಗಳಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಗಳು ವರದಿಯಾಗುತ್ತಿವೆ. ಹಾಗಾಗಿ ರೈತರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಜೀವ ಹಾನಿ ಸಂಭವಿಸದಂತೆ ನಿಗಾ ವಹಿಸಬೇಕು ಎಂದರು.