

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರ ವ್ಯಾಪ್ತಿಯಲ್ಲಿನ ಬೆಂಗಳೂರು ರಸ್ತೆಯ ನಾಯಿಂದ್ರಹಳ್ಳಿ ಗೇಟ್ ಬಳಿ ಟಾರ್ ಜೀಪು ಮತ್ತು ಬುಲೆಟ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಕೈವಾರ ಹೋಬಳಿ ತಳಗವಾರ ಗ್ರಾಮದ ಅರ್ಜುನ್ (30 ವರ್ಷ) ಹಾಗೂ ಪುನೀತ್ (20) ಎಂದು ಗುರುತಿಸಲಾಗಿದೆ. ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮುಗಿಸಿ ಕೊಂಡು ಸ್ವಗ್ರಾಮವಾದ ತಳಗವಾರಕ್ಕೆ ಬುಲೇಟ್ ವಾಹನದಲ್ಲಿ ಹೋಗುತ್ತಿದ್ದಾಗ ಬೆಂಗಳೂರಿನಿಂದ ಚಿಂತಾಮಣಿಗೆ ಬರುತ್ತಿದ್ದ ಟಾರ್ ಜೀಪು ಡಿಕ್ಕಿ ಹೊಡೆದಿದೆ. ಡಿಕ್ಕಿಯಲ್ಲಿ ಬುಲೆಟ್ ಸವಾರರು ಇಬ್ಬರು ತಲೆಗೆ ತೀವ್ರವಾಗಿ ಗಾಯವಾಗಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಟಾರ್ ಜೀಪು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನು ಅಪಘಾತ ನಡೆದ ಅರ್ಧ ಗಂಟೆಯಾದರೂ ಸ್ಥಳಕ್ಕೆ ಆಂಬುಲೆನ್ಸ್ ವಾಹನ ಮತ್ತು ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಬಾರದ ಕಾರಣ ಸಾರ್ವಜನಿಕರು ಅಕ್ರೋಶಗೊಂಡು ರಸ್ತೆ ತಡೆ ನಡೆಸಿದರು. ಇದರಿಂದ ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆ ಸಂಚಾರ ಸಂಪೂರ್ಣ ಅಸ್ಥವ್ಯಸ್ಥವಾಗಿತ್ತು.
ಇನ್ನು ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅಪಘಾತದ ವಾಹನಗಳು ಎರಡು ಸಂಪೂರ್ಣ ನಜ್ಜುಗುಜ್ಚಾಗಿದ್ದು ಎರಡು ವಾಹನಗಳನ್ನು ಕ್ರೇನ್ ಮೂಲಕ ಅಪಘಾತ ಸ್ಥಳದಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.