ತುಮಕೂರು ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್​ಗೆ ಇಬ್ಬರು ಬಲಿ ; 23 ಸಕ್ರಿಯ ಪ್ರಕರಣ

black
Published on

ತುಮಕೂರು: ಕರೊನಾ ಮಹಾಮಾರಿಯ ಅಟ್ಟಹಾಸದ ಜತೆಗೆ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಆತಂಕ ಸೃಷ್ಟಿಸಿದೆ. ಕುಣಿಗಲ್ ತಾಲೂಕಿನಲ್ಲಿ ಇಬ್ಬರು ಬ್ಲ್ಯಾಕ್ ಫಂಗಸ್​ಗೆ ಬಲಿಯಾಗಿರುವುದು ಜಿಲ್ಲಾಡಳಿತಕ್ಕೆ ಆಘಾತ ತಂದಿದೆ.

ಜಿಲ್ಲೆಯಲ್ಲಿ ಈವರೆಗೆ 23 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ತುಮಕೂರಲ್ಲಿ 8, ಕುಣಿಗಲ್​ನಲ್ಲಿ 5, ಪಾವಗಡದಲ್ಲಿ 3, ಶಿರಾ, ಮಧುಗಿರಿಯಲ್ಲಿ ತಲಾ 2, ಚಿ.ನಾ.ಹಳ್ಳಿ, ತುರುವೇಕೆರೆ ಮತ್ತು ಗುಬ್ಬಿಯಲ್ಲಿ ತಲಾ 1 ಪ್ರಕರಣಗಳು ವರದಿಯಾಗಿದ್ದು, ಒಟ್ಟು 23 ಸಕ್ರಿಯ ಪ್ರಕರಣಗಳಿವೆ.

ಇಬ್ಬರು ಬಲಿ: ಕುಣಿಗಲ್ ತಾಲೂಕಿನಲ್ಲೇ ಬ್ಲ್ಯಾಕ್ ಫಂಗಸ್ ಇಬ್ಬರನ್ನು ಬಲಿ ಪಡೆದಿದೆ. ಕರೊನಾದಿಂದ ಗುಣಮುಖರಾಗಿ ಇತ್ತೀಚೆಗೆ ಬ್ಲ್ಯಾಕ್ ಫಂಗಸ್​ಗೆ ತುತ್ತಾಗಿದ್ದ ಹೋಬಳಿಯ ಇಪ್ಪಾಡಿ ಗ್ರಾಮದ ವಿಎಸ್​ಎಸ್​ಎನ್ ಅಧ್ಯಕ್ಷ, ಗ್ರಾಪಂ ಸದಸ್ಯ ಐ.ಜಿ.ರಮೇಶ್ (57) ಭಾನುವಾರ ಮೃತಪಟ್ಟಿದ್ದಾರೆ. ಮೇ 10 ರಂದು ಹá-ಲಿಯೂರು ದá-ರ್ಗದ ರಾಮಚಂದ್ರಯ್ಯ (44) ಎಂಬುವವರು ಬ್ಲ್ಯಾಕ್ ಫಂಗಸ್​ನಿಂದ ಮೃತಪಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಅಲ್ಲದೆ, ಶಿರಾ ಮೂಲದ ವಕೀಲ ಶಶಿಧರ್ (48) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬ್ಲಾ್ಯಕ್ ಫಂಗಸ್​ಗೆ ತುತ್ತಾಗಿದ್ದಾರೆಂದು ಶಂಕಿಸಲಾಗಿದೆ.

ಜಿಲ್ಲೆಯಲ್ಲಿ ಔಷಧ ಇಲ್ಲ! : ಕರೊನಾದಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ಕರೊನಾಗಿಂತ ಅಪಾಯಕಾರಿಯಾಗಿದ್ದು, ಸದ್ಯಕ್ಕೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಔಷಧ ಕೂಡ ಲಭ್ಯವಿಲ್ಲವಿರುವುದು ಆತಂಕಕಾರಿ ಎನಿಸಿದೆ.

ಕರೊನಾಗೆ 13 ಮಂದಿ ಬಲಿ : ಜಿಲ್ಲೆಯಲ್ಲಿ ಕರೊನಾ ನಿಯಂತ್ರಿಸಲು ಜಿಲ್ಲಾಡಳಿತ ಹರಸಾಹಸಪಡುತ್ತಿದೆ. ಭಾನುವಾರ ಒಂದೇ ದಿನ 13 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು 1669 ಜನರಲ್ಲಿ ಸೋಂಕು ದೃಢಪಟ್ಟಿದ್ದು ಈವರೆಗೆ ಸೋಂಕಿತರ ಸಂಖ್ಯೆ 89189ಕ್ಕೇರಿದೆ. ಸಮಾಧಾನದ ಅಂಶವೆಂದರೆ 2656 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ತುಮಕೂರಿನ ಸಂತೆಪೇಟೆಯ 35 ವರ್ಷದ ಮಹಿಳೆ, ಈದ್ಗಾ ಮೊಹಲ್ಲಾದ 42 ವರ್ಷದ ವ್ಯಕ್ತಿ, ಶೆಟ್ಟಿಹಳ್ಳಿಯ 32 ವರ್ಷದ ವ್ಯಕ್ತಿ, ಸದಾಶಿವನಗರದ 54 ವರ್ಷದ ವ್ಯಕ್ತಿ ಹಾಗೂ ತುಮಕೂರು ತಾಲೂಕಿನ ಮುದಸಂದ್ರದ 70 ವರ್ಷದ ವೃದ್ಧೆ ಕರೊನಾದಿಂದ ಮೃತಪಟ್ಟಿದ್ದಾರೆ. ಸೋಂಕಿಗೆ ತುತ್ತಾಗಿದ್ದ ಕುಣಿಗಲ್ ತಾಲೂಕಿನ ಎಡೆಯೂರಿನ 64 ವರ್ಷದ ವೃದ್ಧ, ಗುಬ್ಬಿ ತಾಲೂಕಿನ ಅರಿವೇಸಂದ್ರ 37 ವರ್ಷದ ವ್ಯಕ್ತಿ, ಮಧುಗಿರಿ ತಾಲೂಕು ಮುದ್ದೇನಹಳ್ಳಿಯ 55 ವರ್ಷದ ವ್ಯಕ್ತಿ, ಕಿತ್ತಗಹಳ್ಳಿಯ 73 ವರ್ಷದ ವೃದ್ಧ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಕಸಂದ್ರದ 70 ವರ್ಷದ ವೃದ್ಧ, ತಿಮ್ಮನಹಳ್ಳಿಯ 57 ವರ್ಷದ ವ್ಯಕ್ತಿ, ಪಾವಗಡ ತಾಲೂಕಿನ ಶ್ರೀನಿವಾಸಪುರದ 60 ವರ್ಷದ ವೃದ್ಧೆ, ತಿಪಟೂರು ತಾಲೂಕು ಸುಗೂರಿನ 33 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

1669 ಹೊಸ ಪ್ರಕರಣ: ಜಿಲ್ಲೆಯಲ್ಲಿ 1669 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತುಮಕೂರು ತಾಲೂಕಿನಲ್ಲಿ 370, ಶಿರಾ 249, ಮಧುಗಿರಿ 201, ಗುಬ್ಬಿ 171, ಚಿಕ್ಕನಾಯಕನಹಳ್ಳಿ 165, ತುರುವೇಕೆರೆ 129, ಕೊರಟಗೆರೆ 121, ತಿಪಟೂರು 118, ಪಾವಗಡ 84 ಹಾಗೂ ಕುಣಿಗಲ್ ತಾಲೂಕಿನಲ್ಲಿ 61 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 2656 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

500ಕ್ಕೂ ಹೆಚ್ಚು ಮದುವೆಗಳು ! : ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಆತಂಕದ ನಡುವೆಯೂ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ವಿವಾಹಗಳಿಗೆ ಸ್ಥಳೀಯ ತಾಲೂಕು ಆಡಳಿತದ ಅನುಮತಿ ಪಡೆಯಲಾಗಿದೆ. ಭಾನುವಾರ, ಸೋಮವಾರ ಶುಭಮುಹೂರ್ತವಿದ್ದು ಮದುವೆ ಮುಂದೂಡುವುದು ಬೇಡವೆನ್ನುವ ಕಾರಣಕ್ಕೆ ಹೆಚ್ಚು ಸಂಖ್ಯೆಯಲ್ಲಿ ವಿವಾಹಗಳು ನೆರವೇರುತ್ತಿವೆ. ಕಲ್ಯಾಣಮಂಟಪಗಳು, ದೇವಸ್ಥಾನಗಳಲ್ಲಿ ವಿವಾಹಕ್ಕೆ ಅವಕಾಶ ನೀಡದೆ ಇರುವುದರಿಂದ ಮನೆಗಳ ಮುಂದೆಯೇ ವಿವಾಹವನ್ನು ಸರಳವಾಗಿ ಮಾಡುತ್ತಿರುವುದು ವಿಶೇಷವೆನಿಸಿದೆ. ವಧುವಿನ ಕಡೆ 20, ವರನ ಕಡೆಯವರು 20 ಮಂದಿಯಷ್ಟೇ ವಿವಾಹಗಳಲ್ಲಿ ಭಾಗಿಯಾಗಲು ಅವಕಾಶವಿದೆ. ತುಮಕೂರು ತಾಲೂಕು ಒಂದರಲ್ಲೇ 200ಕ್ಕೂ ಹೆಚ್ಚು ವಿವಾಹಕ್ಕೆ ಅನುಮತಿ ಕೋರಿ ಅರ್ಜಿ ಬಂದಿವೆ. ಇನ್ನು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 80, ಪಾವಗಡ 40, ಮಧುಗಿರಿ ಹಾಗೂ ಕೊರಟಗೆರೆ ತಲಾ 60 ಮದುವೆಗಳಿಗೆ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ. ಕೆಲವು ತಾಲೂಕುಗಳಲ್ಲಿ ಒಟ್ಟು ಎಷ್ಟು ಅರ್ಜಿಗಳು ಬಂದಿದೆ ಎಂಬ ಒಟ್ಟು ಮಾಹಿತಿ ದೊರೆತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net