

ಶಿವಮೊಗ್ಗ: ಸಾಗರ ರಸ್ತೆಯ ಬಾರ್‌ವೊಂದರ ಮುಂದೆ ಯುವಕರಿಬ್ಬರ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಅಪ್ಪ-ಮಗನನ್ನು ತುಂಗನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಲುಕ್ಯನಗರದ ಈಶ್ವರ್ ಮತ್ತು ಸಚಿನ್ ಬಂಧಿತರು. ಎರಡು ದಿನಗಳ ಹಿಂದೆ ಹರೀಶ್ ಮತ್ತು ಮಂಜುನಾಥ್ ಸಾಗರ ರಸ್ತೆಯ ಬಾರ್‌ಗೆ ತೆರಳಿ ಮದ್ಯ ಸೇವಿಸಿದ್ದರು. ಈ ವೇಳೆ ಚಾಲುಕ್ಯನಗರದ ಈಶ್ವರ್ ಜತೆ ಕಿರಿಕ್ ಆಗಿತ್ತು. ಇಬ್ಬರೂ ಈಶ್ವರ್‌ಗೆ ಕೆಳಗೆ ಬಾ ನೋಡ್ಕೊಂತೀವಿ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದರಿಂದ ಹೆದರಿದ ಈಶ್ವರ್ ತನ್ನ ಪುತ್ರ ಸಚಿನ್‌ಗೆ ಕರೆ ಮಾಡಿ ಬಾರ್ ಎದುರು ಇಬ್ಬರು ನನಗೆ ಹೊಡೆಯಲು ಹೊಂಚು ಹಾಕಿದ್ದಾರೆಂದು ತಿಳಿಸಿದ್ದಾನೆ. ಆಟೋದಲ್ಲಿ ಸ್ಥಳಕ್ಕೆ ಬಂದ ಸಚಿನ್ ಕಬ್ಬಿಣದ ರಾಡಿನಿಂದ ಹರೀಶ್ ಮತ್ತು ಮಂಜುನಾಥಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಸಿಸಿ ಕ್ಯಾಮೆರಾ ತುಣುಕುಗಳನ್ನು ಪರಿಶೀಲಿಸಿದ ತುಂಗಾನಗರ ಠಾಣೆ ಪೊಲೀಸರು ಅಪ್ಪ-ಮಗನನ್ನು ಬಂಧಿಸಿದ್ದಾರೆ.