

ಗೌರಿಬಿದನೂರು: ಜಮೀನಿನ ವಿವಾದಿಂದಾಗಿ ಮೊದಲೇ ಎರಡು ಕುಟುಂಬಗಳು ಪರಸ್ಪರ ದ್ವೇಷದಿಂದ ಬೇಯುತ್ತಿದ್ದರೆ ದುಬಾರಿ ಬೆಲೆಯ ಟೊಮ್ಯಾಟೊ ಬೆಳೆಯನ್ನು ಉಳಿಸಿಕೊಳ್ಳಲು ಅನುಸರಿಸಿದ ವಿದ್ಯುತ್ ತಂತಿಬೇಲಿ ತಂತ್ರ ಇಬ್ಬರನ್ನು ಬಲಿ ಪಡೆದುಕೊಂಡಿದೆ.
ತಾಲೂಕಿನ ಚರಕುಮಾಟೇನಹಳ್ಳಿಯಲ್ಲಿ ಜಮೀನಿನ ರಕ್ಷಣೆಗೆ ಹಾಕಿದ ಬೇಲಿ ಸ್ಪರ್ಶಿಸಿದ್ದರಿಂದ ವಿದ್ಯುತ್ ಪ್ರವಹಿಸಿ ಯುವಕ ವಸಂತ್‌ರಾವ್ (29) ಮೃತಪಟ್ಟರೆ, ಅಮಾಯಕನ ಪ್ರಾಣವನ್ನು ತೆಗೆದ ಎಂಬ ಆಕ್ರೋಶದಲ್ಲಿ ದುರ್ಘಟನೆಗೆ ಕಾರಣ ಎನ್ನಲಾದ ಜಮೀನು ಮಾಲೀಕ ಅಶ್ವತ್ಥರಾವ್ (47) ಎಂಬಾತನನ್ನು ಮೃತನ ಸಂಬಂಧಿಕರು ಹೊಡೆದು ಸಾಯಿಸಿದ್ದಾರೆ.
ಪೊಲೀಸರ ಸರ್ಪಗಾವಲು: ಮಂಚೇನಹಳ್ಳಿ ಠಾಣೆ ಪೊಲೀಸರು ಎರಡೂ ಕಡೆಯವರಿಂದ ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಬ್ಬರ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇನ್ನು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಬ್ ಇನ್‌ಸ್ಪೆಕ್ಟರ್ ಶಶಿಧರ್ ಮತ್ತು ವಿಜಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಘಟನೆಯ ಹಿನ್ನೆಲೆ
ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ, ಉತ್ಪನ್ನಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಟೊಮ್ಯಾಟೊಗೆ ಬಂಪರ್ ಬೆಲೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಲೀಕ ಅಶ್ವತ್ಥರಾವ್ ತೋಟದಲ್ಲಿ ಬೆಳೆದಿರುವ ಟೊಮ್ಯಾಟೊ ಬೆಳೆ ರಕ್ಷಿಸಿಕೊಳ್ಳಲು ಬೇಲಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದರು ಎನ್ನಲಾಗಿದೆ. ಈ ಮಾಹಿತಿ ತಿಳಿಯದ ವಸಂತ್‌ರಾವ್ ಪಕ್ಕದ ತೋಟದಲ್ಲಿ ಓಡಾಡುತ್ತಿದ್ದ ಸಂದರ್ಭದಲ್ಲಿ ಮೇಕೆ ಮರಿಯನ್ನು ಅಟ್ಟಿಸಿಕೊಂಡು ಹೋದಾಗ ಕರೆಂಟ್ ಶಾಕ್ ಹೊಡೆದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ವಿಷಯ ಕಾಡ್ಗಿಚ್ಚಿನಂತೆ ಊರಿನಲ್ಲಿ ಹರಡಿದ್ದು ಮೃತನ ಸಂಬಂಧಿಕರು ಗುಂಪಾಗಿ ಬಂದು ಥಳಿಸಿದ್ದಾರೆ. ಕೊನೆಗೆ ಸ್ಥಳೀಯರು ಹಲ್ಲೆಕೋರರನ್ನು ಎಳೆದಾಡಿ ಗಾಯಾಳುವನ್ನು ರಕ್ಷಿಸಿದ್ದಾರೆ. ಆದರೂ ಗಂಭೀರವಾಗಿ ಗಾಯಗೊಂಡಿದ್ದ ಅಶ್ವತ್ಥರಾವ್ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಅಕ್ರಮವಾಗಿ ಬೇಲಿ ಅಳವಡಿಕೆ: ತೋಟಕ್ಕೆ ಅಶ್ವತ್ಥರಾವ್ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದೇ ದುರ್ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಜನರು ಓಡಾಡುವ ಸಂದರ್ಭದಲ್ಲಿ ಅವಘಡಗಳು ಸಂಭವಿಸಬಹುದೆಂಬ ಯೋಚನೆ ಮಾಡಿಲ್ಲ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯವನ್ನು ಪಡೆಯಬೇಕಾಗಿದ್ದನ್ನು ಬಿಟ್ಟು ಯುವಕನ ಕಡೆಯವರು ಆವೇಶದಲ್ಲಿ ದೊಣ್ಣೆಗಳಿಂದ ಹಲ್ಲೆಗೈದು ಒಂದು ಪ್ರಾಣ ಬಲಿ ಪಡೆದುಕೊಂಡಿದ್ದಾರೆ.
ಜಮೀನು ವಿವಾದ, ಕುಟುಂಬ ವೈಷಮ್ಯ?
ಕಳೆದ ಹಲವು ತಿಂಗಳಿಂದಲೂ ಅಶ್ವತ್ಥರಾವ್ ಹಾಗೂ ವಸಂತ್‌ರಾವ್ ಕುಟುಂಬಗಳ ಮಧ್ಯೆ ಆಗಾಗ ಮಾತಿನ ಚಕಮಕಿ, ಗಲಾಟೆ ನಡೆದಿದ್ದು ಗ್ರಾಮದ ಹಿರಿಯರು ಎರಡು ಕಡೆಯವರನ್ನೂ ಕೂರಿಸಿ ಸಂಧಾನ ಮಾಡಿಸಿದ್ದರು. ಆದರೂ ಒಳಗಿನ ದ್ವೇಷ ಹಾಗೆಯೇ ಇತ್ತು ಎನ್ನಲಾಗಿದೆ.