ಇಬ್ಬರು ಪಿಡಿಒಗಳ ಅಮಾನತು

Suspend
Published on

ಚಿತ್ರದುರ್ಗ: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಇಬ್ಬರು ಗ್ರಾಪಂ ಪಿಡಿಒಗಳನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಅವರು ಆದೇಶೀಸಿದ್ದಾರೆ. ನಿಯಮಬಾಹೀರವಾಗಿ ಕ್ರಿಯಾ ಯೋಜನೆ ಮಂಜೂರಾತಿ, ಅಕ್ರಮವಾಗಿ ಇ-ಸ್ವತ್ತು ವಿತರಣೆ, ಹಣದ ದುರಪಯೋಗ ಮತ್ತಿತರ ಆ ರೋಪಗಳ ಹಿನ್ನೆಲೆಯಲ್ಲಿ ಹೊಳಲ್ಕೆರೆ ತಾಲೂಕು ಉಪ್ಪರಿಗೇನಹಳ್ಳಿ ಗ್ರಾಪಂ ಪಿಡಿಒ ಜಿ.ಎಂ. ಕರಿಯಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.

ಗ್ರಾಪಂ ಸಭೆಯಲ್ಲಿ ಚರ್ಚಿಸದೆ ನಿಯಮಬಾಹಿರವಾಗಿ ವಿವಿಧ ಯೋಜನೆಗಳಡಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಅನುದಾನ ಸಂಪೂರ್ಣ ದುರಪಯೋಗ, 15ನೇ ಹಣಕಾಸು ಆಯೋಗ ಕ್ರಿಯಾ ಯೋಜನೆ ಅಂದಾಜು ಪಟ್ಟಿ, ಎಂ.ಬಿ. ರೆಕಾರ್ಡ್, ಚೆಕ್‌ಮೆಜರ್‌ಮೆಂಟ್‌ಗಳಿಗೆ ಮೇಲಧಿಕಾರಿಗಳ ಸಹಿ ಇಲ್ಲದೆ, ವೋಚರ್ ಮತ್ತು ಕೊಟೇಷನ್ ಇಲ್ಲದೇ ಅನುಮೋದಿಸಿ, ಅಕ್ರಮವಾಗಿ ಹಣ ಪಾವತಿಸಿದ್ದಾರೆ. ಕುಡಿಯುವ ನೀರು ಮತ್ತು ವಿದ್ಯುತ್ ಸಾಮಗ್ರಿ ಖರೀದಿಯಲ್ಲಿ ಕೆಪಿಟಿಟಿ ಆಕ್ಟ್ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಶಿಸ್ತು ಕ್ರಮಕ್ಕೆ ಜಿಪಂ ಲೆಕ್ಕಾಧಿಕಾರಿ ಮಾಡಿದ ಶಿಫಾರಸು ಆಧರಿಸಿ ಕರಿಯಪ್ಪ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿ ಅನುಮಾನತು ಮಾಡಿ ಸಿಇಒ ಆದೇಶಿಸಿದ್ದಾರೆ.

ದೇವರೆಡ್ಡಿಹಳ್ಳಿ ಗ್ರಾಪಂ ಪಿಡಿಒ ಅಮಾನತು

ಚಳ್ಳಕೆರೆ ತಾಲೂಕಿನ ತಳಕು ಹೋಬಳಿ ದೇವರೆಡ್ಡಿಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೇದವ್ಯಾಸಲು ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.

ಗ್ರಾಪಂ 15ನೇ ಹಣಕಾಸು, ವರ್ಗ 1, ಇ ಸ್ವತ್ತು ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿವೆ. 2023-24 ಮತ್ತು 2024-25ನೇ ಸಾಲಿನ ಎಲ್ಲ ಯೋಜನೆಗಳ ಕುರಿತು ವಿಶೇಷ ಲೆಕ್ಕ ಪರಿಶೋಧನೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಪಿಡಿಒ ಸಲ್ಲಿಸಿದ ದಾಖಲೆ ಪರಿಶೀಲನೆ ವೇಳೆ 2,31,54,326 ರೂ. ಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಹಾಜರುಪಡಿಸಿಲ್ಲ.

2023-24 ಮತ್ತು 2024-25ನೇ ಸಾಲಿನಲ್ಲಿ ಬಳಕೆ ಮಾಡಿರುವ 15ನೇ ಹಣಕಾಸು ಯೋಜನೆಯ 84,40,121ರೂ.ಗಳಿಗೆ ನೀಡಲಾಗಿರುವ ವೋಚರ್ ಮತ್ತು ಲೆಕ್ಕಪತ್ರ ಪರಿಶೀಲಿಸಿದಾಗ, ಟೆಂಡರ್ ಕರೆಯದೆ 1 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಖರೀದಿಗಳಿಗೆ ವ್ಯಯಿಸಲಾಗಿದೆ. ನಿಯಮಗಳನ್ನು ಅನುಸರಿಸಿಲ್ಲ ಎಂದು ಅಮಾನತು ಆದೇಶದಲ್ಲಿ ಸಿಇಒ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net