ಹುಬ್ಬಳ್ಳೀಲಿ ಮತ್ತಿಬ್ಬರಿಗೆ ಸೋಂಕು

h23-Azad Colony 3
Published on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತಿಬ್ಬರಿಗೆ ಕರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಇದರಿಂದ ಧಾರವಾಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9ಕ್ಕೇರಿದೆ. ಮುಲ್ಲಾ ಓಣಿಯ 37 ವರ್ಷದ ವ್ಯಕ್ತಿಯ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಈ ಹಿಂದೆಯೇ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮತ್ತಿಬ್ಬರಿಗೆ ಕರೊನಾ ಬಂದಿರುವುದರಿಂದ ಒಂದೇ ಕುಟುಂಬದ 7 ಮಂದಿ ಸೋಂಕಿತರಾದಂತಾಗಿದೆ.

ಮುಲ್ಲಾ ಓಣಿಯ 30 ವರ್ಷದ ಮಹಿಳೆ (ಪಿ-430), ಕೇಶ್ವಾಪುರದ ಆಜಾದ್ ಕಾಲನಿಯ 13 ವರ್ಷದ ಬಾಲಕಿ(ಪಿ-431)ಯಲ್ಲಿ ಸೋಂಕು ಗುರುವಾರ ದೃಢಪಟ್ಟಿದೆ. ಮುಲ್ಲಾ ಓಣಿ ನಿವಾಸಿ, ಏ. 13ರಂದು ಸೋಂಕು ದೃಢಪಟ್ಟಿದ್ದ ಪಿ-236 ಸಂಖ್ಯೆಯ 37 ವರ್ಷದ ವ್ಯಕ್ತಿಯಿಂದ ಇವರಿಗೆ ಸೋಂಕು ತಗುಲಿದೆ. 30 ವರ್ಷದ ಮಹಿಳೆ ಈತನ ಸಹೋದರಿಯಾಗಿದ್ದರೆ, 13 ವರ್ಷದ ಬಾಲಕಿ ಈತನ ಅಕ್ಕನ ಮಗಳು. 13 ವರ್ಷದ ಬಾಲಕಿಯ ಶಾಲೆಗೆ ರಜೆ ಇದ್ದುದರಿಂದ ಮುಲ್ಲಾ ಓಣಿಯಲ್ಲಿಯ ಅಜ್ಜಿಯ ಮನೆಗೆ ಮಾ. 17ರಂದು ತೆರಳಿದ್ದಳು.

ಕರಾಡಿ ಓಣಿಯ ಖಬರಸ್ತಾನ ಕಾಯುವ ವ್ಯಕ್ತಿಗೆ ಈಗಾಗಲೇ ಸೋಂಕು ದೃಢಪಟ್ಟಿದ್ದು, ಆತ ಸೇರಿ ಎಲ್ಲ ರೋಗಿಗಳಿಗೂ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಧಾರವಾಡ ಹೊಸ ಯಲ್ಲಾ

ಪುರದ ಯುವಕನಲ್ಲಿ ಮೊದಲು ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಆತ ಪೂರ್ತಿ ಗುಣಮುಖನಾಗಿದ್ದು, ಬಿಡುಗಡೆಗೊಂಡಿದ್ದಾನೆ. ಹುಬ್ಬಳಿಯಲ್ಲಿ ಮುಲ್ಲಾ ಓಣಿ ಮತ್ತು ಪಕ್ಕದ ಕರಾಡಿ ಓಣಿಗಷ್ಟೇ ಸೀಮಿತವಾಗಿದ್ದ ಸೀಲ್​ಡೌನ್ ಈಗ ಆಜಾದ್ ಕಾಲನಿಗೆ ವಿಸ್ತರಣೆಯಾಗಿದೆ. ಕಂಟೈನ್​ವೆುಂಟ್ ಏರಿಯಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದು, ಪಹರೆ ಬಿಗಿಗೊಳಿಸಿದ್ದಾರೆ.

ಮತ್ತೆ 125 ಶಂಕಿತರು ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಒಂದು ಕಡೆಯಾಗಿದ್ದರೆ, ಗುರುವಾರ ಮಧ್ಯಾಹ್ನ ಮತ್ತೆ 2 ಪ್ರಕರಣಗಳು ದೃಢಪಟ್ಟಿದ್ದರಿಂದ ಜನರು ಭಯಬೀಳುವಂತಾಗಿದೆ.

ಬುಧವಾರ ಸಂಜೆಯಿಂದ 24 ತಾಸಿನಲ್ಲಿ 125 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಬುಧವಾರ ಇದ್ದ 1838 ಶಂಕಿತರ ಸಂಖ್ಯೆ ಗುರುವಾರ 1954ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 1472 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 1256 ಜನರ ವರದಿ ನೆಗೆಟಿವ್ ಬಂದಿವೆ. 9 ಪ್ರಕರಣಗಳಲ್ಲಿ ಪಾಸಿಟಿವ್ ಕಂಡುಬಂದಿದ್ದು, 8 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಇನ್ನೂ 208 ವರದಿ ಬರಬೇಕಿದೆ. ಬುಧವಾರ ಬಾಕಿ ಇದ್ದ 148 ವರದಿಗಳ ಪೈಕಿ 63 ನೆಗೆಟಿವ್ ಬಂದಿವೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ವಿದೇಶದಿಂದ ಆಗಮಿಸಿದ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 1984 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 1257 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ಗಳಲ್ಲಿ 13 ಜನ ದಾಖಲಾಗಿದ್ದಾರೆ. 28 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 686 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net