

ತೀರ್ಥಹಳ್ಳಿ: ಆಗುಂಬೆ ಪರಿಸರದಲ್ಲೇ ಸುತ್ತುತ್ತಿರುವ ಒಂಟಿ ಸಲಗದ ಜತೆಗೆ ಹೊಸದಾಗಿ ಇನ್ನೂ ಎರಡು ಆನೆಗಳು ಸೋಮೇಶ್ವರ ವನ್ಯಜೀವಿ ವಿಭಾಗದಲ್ಲಿ ಕಾಣಿಸಿಕೊಂಡಿವೆ.
ಹೆಬ್ರಿ ವಲಯದ ಕೋಡ್ಲು ತೀರ್ಥದ ಆಸುಪಾಸಿನಲ್ಲಿ 15 ದಿನಗಳ ಹಿಂದೆ ಒಂದು ಕಾಡಾನೆ ಕಾಣಿಸಿಕೊಂಡಿದೆ. ಇನ್ನೊಂದು ಆನೆ ಗುರುವಾರ ಇದೇ ವಲಯದ ನೀರ್‌ಹಳ್ಳದ ಭಾಗದಲ್ಲಿ ಸಂಚರಿಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ಆನೆಗಳು ಎನ್.ಆರ್.ಪುರದ ಕಡೆಯಿಂದ ಬಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ವನ್ಯಜೀವಿ ವಿಭಾಗದ ಅಧಿಕಾರಿಗಳು ಅಹೋರಾತ್ರಿ ಈ ಆನೆಗಳ ಸಂಚಾರವನ್ನು ಅವಲೋಕಿಸುತ್ತಿದ್ದಾರೆ.
ಹಲವು ವರ್ಷಗಳಿಂದ ಆಗುಂಬೆ ಭಾಗದಲ್ಲೇ ಠಿಕಾಣಿ ಹೂಡಿರುವ ಒಂಟಿ ಸಲಗ ಕೆಲವು ದಿನಗಳಿಂದ ಮಲ್ಲಂದೂರು ಭಾಗದಲ್ಲೇ ಸುತ್ತುತ್ತಿದ್ದು ಎರಡು ದಿನಗಳ ಹಿಂದೆ ಆಗುಂಬೆ ಎವಿಎಂ ವಸತಿ ಶಾಲೆ ಹಿಂಭಾಗದ ಕೆರೆ ಬಳಿ ಬಂದಿದೆ. ಪ್ರವಾಸಿ ಮಂದಿರದ ಎದುರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದ ಕಡೆಯಿಂದ ಮಾವಿನಬೀಳು ಅರಣ್ಯದ ಕಡೆಗೆ ಹೋಗಿದೆ.
ಒಂದು ತಿಂಗಳ ಹಿಂದೆ ಸೀತಾನದಿ ದಡದ ತಣ್ಣೀರ್ ಎಂಬಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಹಿಂದಕ್ಕೆ ಹೋಗಿದೆ. ಈ ಆನೆ ಕೆರೆಕಟ್ಟೆ ಕಡೆಯಿಂದ ಬಂದಿರುವ ಸಾಧ್ಯತೆ ಇದೆ. ಈ ಭಾಗಕ್ಕೆ ಬೇರೆ ಆನೆ ಬಂದಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ ಹೆಬ್ರಿ ವನ್ಯಜೀವಿ ವಿಭಾಗ ಆರ್‌ಎಫ್‌ಒ ಗೌರವ್.