ಉಡುಪಿ ಉಸ್ತುವಾರಿ, ಮೀನುಗಾರಿಕಾ ಸಚಿವರು ಕಾಣೆಯಾಗಿದ್ದಾರೆ...!?

Minsters Lead
Published on

ಲಕ್ಷ್ಮೀ, ಮಂಕಾಳ ವಿರುದ್ಧ ಉಡುಪಿ ಮೀನುಗಾರರ ಆಕ್ರೋಶ

ಫೋಟೋ-ಬರಹ ಸಹಿತ ಜಾಲತಾಣಗಳಲ್ಲಿ ಪೋಸ್ಟ್ ವೈರಲ್​

ವಿಜಯವಾಣಿ ಸುದ್ದಿಜಾಲ ಉಡುಪಿಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಕಾಣೆಯಾಗಿದ್ದಾರೆ..!? ಅವರಿಬ್ಬರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ತಿಳಿಸಿ...!!

ಹೀಗೊಂದು ಪೋಸ್ಟ್​ ಕಳೆದ ಮೂರ್ನಾಲ್ಕು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಮಲ್ಪೆಯಲ್ಲಿ ಮಾ.18ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರೂ ಸಚಿವರ ಭಾವಚಿತ್ರ ಲಗತ್ತಿಸಿ, ಇವರು ಕೊನೆಯ ಬಾರಿ ಉಡುಪಿಯಲ್ಲಿ ಕಾಣಿಸಿಕೊಂಡಿದ್ದು ತಿಳಿದಿಲ್ಲ ಎಂಬ ಬರಹದ ಪೋಸ್ಟ್​, ಜಿಲ್ಲೆಯ ಜನರ ಗಮನ ಸೆಳೆಯುತ್ತಿದೆ.

ಮರೀಚಿಕೆಯಾದ ಉಸ್ತುವಾರಿ

ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ನೇಮಕವಾದ ಬಳಿಕ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್​, ಉಡುಪಿಯಲ್ಲಿಯೇ ಮನೆ ಮಾಡುತ್ತೇನೆ ಎಂದು ಹೇಳಿದ್ದರು. ಮಾತಿನಂತೆ ಉಡುಪಿಯಲ್ಲಿ ಮನೆ ಮಾಡಿದ್ದರೂ ಸಹ ಸರ್ಕಾರ ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ ಅವರು ಉಡುಪಿಗೆ ಈವರೆಗೆ ಬಂದದ್ದು ಕೇವಲ ಮೂರ್ನಾಲ್ಕು ಸಲ ಮಾತ್ರ. ಆಗೊಮ್ಮೆ-ಈಗೊಮ್ಮೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಮಳೆಯಂತೆ ಅವರು ಬಂದು ಹೋಗುತ್ತಿದ್ದಾರೆ. ಜಿಲ್ಲೆಯ ಜನರ ಸಮಸ್ಯೆಗೆ ಧ್ವನಿಯಾಗುತ್ತಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವೆಯೆಂದರೆ ಮರೀಚಿಕೆ ಎಂಬಂತಾಗಿದೆ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ.

ಪಕ್ಕದ ಜಿಲ್ಲೆಯ ಸಚಿವ ವೈದ್ಯ

Ministers 2
ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು. ಸಮೀಪದಲ್ಲೇ ಅವರು ಇದ್ದರೂ ಸಹ ಉಡುಪಿಗೆ ನೆಂಟರ ಹಾಗೆ ಬಂದು ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಲೈಟ್​ ಫಿಶಿಂಗ್​ ಸಮಸ್ಯೆ ಸೇರಿದಂತೆ ಮೀನುಗಾರರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಮಲ್ಪೆ ಬಂದರಿನಲ್ಲಿ ನಡೆದ ಹಲ್ಲೆ ಪ್ರಕರಣ ಹಾಗೂ ಐವರು ಮೀನುಗಾರರ ಬಂಧನ ಆಗಿದ್ದರೂ ಪ್ರಕರಣದ ಸತ್ಯಾಸತ್ಯತೆ ತಿಳಿದು ಸರ್ಕಾರಕ್ಕೆ ಮಾಹಿತಿ ನೀಡುವ ಕೆಲಸವನ್ನೂ ಮಾಡಿಲ್ಲ ಎಂಬ ಆರೋಪ ಮೀನುಗಾರರಿಂದ ಕೇಳಿಬರುತ್ತಿದೆ.

ಪೋಸ್ಟರ್​ನಲ್ಲಿ ಏನಿದೆ?

ರಾಜ್ಯಕ್ಕೆ ಗೃಹಲಕ್ಷ್ಮಿ, ಜಿಲ್ಲೆಗೆ ಜೈಲ್​ ಲಕ್ಷ್ಮೀ ಗ್ಯಾರಂಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ, ಉಡುಪಿಯಲ್ಲಿ ಕೊನೇ ಬಾರಿ ಕಾಣಿಸಿಕೊಂಡಿದ್ದು ಮಾಹಿತಿ ಇಲ್ಲ. ಸಾರ್ವಜನಿಕವಾಗಿ ಕಂಡರೆ ತಿಳಿಸಿ ಎಂದು ಬರೆಯಲಾಗಿದೆ. ಮೊಗವೀರ ಸಮಾಜದ ಮೀನುಗಾರ ಮಹಿಳೆಯರು ಸುಳ್ಳು ಕೇಸ್​ನಿಂದ ಜೈಲ್​ ಸೇರಿದ್ದರೂ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಸೌಜನ್ಯಕ್ಕೂ ಉಡುಪಿಗೆ ಭೇಟಿ ನೀಡಿಲ್ಲ ಎಂದು ಬರಹಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net