ದರ್ಶನ್ ಗ್ಯಾಂಗ್‌ನ ಇಬ್ಬರು ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಶಿಫ್ಟ್

centrol jail raid police
ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್.
Published on

ಶಿವಮೊಗ್ಗ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬುಧವಾರ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರಿಸಲಾಯಿತು. ಇದಕ್ಕೂ ಮುನ್ನ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ 100ಕ್ಕೂ ಅಧಿಕ ಸಿಬ್ಬಂದಿ ಜೈಲಿಗೆ ದಿಢೀರ್ ದಾಳಿ ನಡೆಸಿ ಕಾರಾಗೃಹದ ಸೆಲ್‌ಗಳನ್ನು ತಪಾಸಣೆ ನಡೆಸಿದರು.

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮತ್ತು ಇತರೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗುತ್ತಿದೆ. ಅದರಂತೆ ಶಿವಮೊಗ್ಗದ ಕಾರಾಗೃಹಕ್ಕೆ ಆರೋಪಿಗಳಾದ ಜಗದೀಶ್ ಮತ್ತು ಲಕ್ಷ್ಮಣನನ್ನು ಶಿಫ್ಟ್ ಮಾಡಲಾಗಿದೆ.
ಆರೋಪಿಗಳ ಆಗಮನಕ್ಕೂ ಮುನ್ನವೇ ಜಿಲ್ಲಾ ಪೊಲೀಸರು ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಎಲ್ಲ ಬ್ಯಾರಕ್ ಮತ್ತು ಸೆಲ್‌ಗಳನ್ನು ತಪಾಸಣೆ ನಡೆಸಿದರು. ಕಾರಾಗೃಹದಲ್ಲಿ ಗಾಂಜಾ ಹಾಗೂ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೈದಿಗಳು ಸೇರಿ 778 ಮಂದಿ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ದಾಳಿ ವೇಳೆ ಬೀಡಿ, ಸಿಗರೇಟು ಹೊರತುಪಡಿಸಿ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ.
ಎಎಸ್ಪಿಗಳಾದ ಅನಿಲ್ಕುಮಾರ್ ಭೂಮರಡ್ಡಿ, ಎ.ಜಿ.ಕಾರ್ಯಪ್ಪ, ಡಿವೈಎಸ್ಪಿ ಕೃಷ್ಣಮೂರ್ತಿ, ಇನ್‌ಸ್ಪೆಕ್ಟರ್‌ಗಳಾದ ತುಂಗಾನಗರ ಮಂಜುನಾಥ್, ದೊಡ್ಡಪೇಟೆಯ ರವಿ ಪಾಟೀಲ್, ಕೋಟೆ ಠಾಣೆಯ ಎಂ.ಎಸ್.ದೀಪಕ್, ಶಿವಮೊಗ್ಗ ಗ್ರಾಮಾಂತರ ಠಾಣೆಯ ಸತ್ಯನಾರಾಯಣ, ಡಿಎಆರ್ ಸಶಸ್ತ್ರ ಪೊಲೀಸ್ ನಿರೀಕ್ಷಕ ಪ್ರಶಾಂತ್, ಇಬ್ಬರು ಪಿಎಸ್‌ಐಗಳು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net