

ಹಾವೇರಿ: ಮದ್ಯಪಾನದ ಚಟಕ್ಕೆ ಇಲ್ಲೊಬ್ಬ ವ್ಯಕ್ತಿಯ ಪತ್ನಿ ಬಲಿಯಾಗಿದ್ದರೆ, ಪುತ್ರಿ ಗಂಭೀರ ಸ್ಥಿತಿಯಲ್ಲಿದ್ದಾಳೆ. ಮಾತ್ರವಲ್ಲ, ಕುಡಿತದ ಚಟ ಕೊನೆಗೆ ಅವನನ್ನೂ ಸಾಯುವಂತೆ ಮಾಡಿದೆ. ಇಂಥದ್ದೊಂದು ದುರಂತ ಪ್ರಕರಣ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ತಾಲೂಕಿನ ಆಲದಕಟ್ಡಿ ಗ್ರಾಮದ ಶಂಕರ್ (56), ಈತನ ಪತ್ನಿ ವಾಣಿಶ್ರೀ (50) ಸಾವಿಗೀಡಾದವರು. ಮಗಳು ಕೀರ್ತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಬೆಳೆ ಹಾಳಾಗಿ ಸಾಲ ಹೆಚ್ಚಾಗಿದ್ದರಿಂದ ಚಿಂತೆಗೀಡಾಗಿದ್ದ ಶಂಕರ್ ಕುಡಿತದ ಚಟ ಹಚ್ಚಿಕೊಂಡಿದ್ದ.
ಪತಿ ಮದ್ಯವ್ಯಸನಿಯಾಗಿದ್ದನ್ನು ನೋಡಿದ ಪತ್ನಿ, ಮನೆಯಲ್ಲಿ ವಯಸ್ಸಿಗೆ ಬಂದ ಮಕ್ಕಳಿದ್ದಾರೆ, ಹೀಗೆ ಕುಡಿದರೆ ಹೇಗೆ, ಕುಡಿಯಬೇಡ ಎಂದು ಬುದ್ಧಿಮಾತು ಹೇಳಿದ್ದಾಳೆ. ಹೆಂಡತಿ ಕುಡಿತ ಬಿಡು ಎಂದಿದ್ದಕ್ಕೆ ಗಂಡ ಮನೆಯನ್ನೇ ಬಿಟ್ಟು ಜಮೀನಿನಲ್ಲಿ ವಾಸ ಮಾಡಲಾರಂಭಿಸಿದ್ದ.
ಇದರಿಂದ ನೊಂದ ಪತ್ನಿ ಹಾಗೂ ಮಗಳು ವಿಷ ಸೇವಿಸಿದ್ದು, ತೀವ್ರ ಅಸ್ವಸ್ಥಗೊಂಡ ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವಾಣಿಶ್ರೀ ಸಾವಿಗೀಡಾದರೆ, ಗಂಭೀರ ಸ್ಥಿತಿಯಲ್ಲಿರುವ ಪುತ್ರಿ ಕೀರ್ತಿ ಜೀವನ್ಮರಣ ಹೋರಾಟದಲ್ಲಿದ್ದಾಳೆ.
ಪತ್ನಿ ವಿಷ ಕುಡಿದು ಸಾವಿಗೀಡಾದ ಸುದ್ದಿ ಕೇಳಿ ಮನನೊಂದ ಶಂಕರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಂಕರ್ 6ರಿಂದ 7 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.