

ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜುವರೆಗಿನ ದ್ವಿಪಥ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಪಟ್ಟಣ ಪಂಚಾಯಿತಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ಪರವಾಗಿ ಮಾತನಾಡಿದ ರಘುನಾಥ ಕೊಂಡಿ, ಈ ಕಾಮಗಾರಿಗೆ ಯಾರೂ ದಿಕ್ಕು ದೆಸೆ ಇಲ್ಲದಂತಾಗಿದೆ. ಅದಕ್ಕಾಗಿಯೆ ಇಂದು ನಾವು ಕೇಳಲು ಬಂದಿದ್ದೇವೆ. ಅಧಿಕಾರಿಗಳು, ಗುತ್ತಿಗೆದಾರರ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಡಿಕೊಪ್ಪ ನಿವಾಸಿ ಮಂಜುನಾಥ ಹೆಗಡೆ ಮಾತನಾಡಿ, ಕಳೆದ ಮಾರ್ಚ್ 8ಕ್ಕೆ ಶಾಸಕರು ಭೂಮಿಪೂಜೆ ಮಾಡಿದರು. ಒಂದು ತಿಂಗಳ ನಂತರ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಿದರು. ಅನಗತ್ಯ ವಿಳಂಬದಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಕಾಮಗಾರಿ ಕುರಿತು ಫಲಕವನ್ನೂ ಅಳವಡಿಸಿಲ್ಲ ಎಂದರು.
ಸಂತೋಷ ಮಣ್ಣೊಡ್ಡರ ಮಾತನಾಡಿ, ಕಾಮಗಾರಿ ಈ ವರ್ಷ ಮುಗಿಯುವ ಹಾಗೆ ಕಾಣುತ್ತಿಲ್ಲ. ವಾರದೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ಪಟ್ಟಣ ಪಂಚಾಯತಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ, ಈ ಹಿಂದೆ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ವಿಭಜಕ ನಿರ್ವಿುಸಲಾಗಿದೆ. ಅದನ್ನು ತೆರವು ಮಾಡಿ ಕಾಮಗಾರಿ ಮಾಡಬೇಕು ಎಂದರು. ಎಂದರು.
ಪ.ಪಂ. ಇಂಜಿನಿಯರ್ ಕಾಟೇವಾಲೆ ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ವಿನೋದ ರಾಯಬಾಗಿ, ಅಲ್ಲಾಭಕ್ಷಿ ನದಾಫ್, ಮಹೇಶ ಶಿವಶಿಂಪರ, ಕರವೇ ಅಧ್ಯಕ್ಷ ನಿಂಗಪ್ಪ ಹೊನ್ನಾಪೂರ, ಶಿವಾನಂದ ಇಟಗಿ, ನವೀನ ಗುರುವಡೆಯರ, ರವಿ ಗೊಲ್ಲರ, ರಾಮು ನಿರಂಜನ, ವೀರೇಶ ಬಿನ್ನಾಳ, ನಾಗರಾಜ ಜಿರ್ಲ, ಗಂಗಾಧರ ಮಡಿವಾಳರ, ಶಿವು ಹೂಗಾರ, ಪವನ ಕಟ್ಟಿಮನಿ, ವೀರಯ್ಯ ಶಂಶಿಮಠ, ಮುತ್ತು ದಿಂಡೂರ, ಮಹಾಂತೇಶ ಗುರುವಡೆಯರ ಇತರರಿದ್ದರು.
ರಸ್ತೆ ಅವ್ಯವಸ್ಥೆ ಬಗ್ಗೆ ವಿಜಯವಾಣಿ ದಿನಪತ್ರಿಕೆಯಲ್ಲಿ ಇತ್ತೀಚೆಗೆ ನಿತ್ಯವೂ ಧೂಳು ಟ್ರಾಫಿಲ್ ಜಾಮ್ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.