

ಹರೀಶ್ ಮೋಟುಕಾನ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿಯ 782 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಈ ಪೈಕಿ 431 ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲಾಗಿದ್ದು, ಬಾಕಿ ಉಳಿದ ಪ್ರಕರಣಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ.
ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 782 ಪ್ರಕರಣಗಳಲ್ಲಿ ಒಟ್ಟು 2,467.37 ಎಕರೆ ಜಮೀನು ಒತ್ತುವರಿಯಾಗಿದೆ. 351 ಪ್ರಕರಣಗಳಲ್ಲಿ 1,051.55 ಎಕರೆ ಜಮೀನು ತೆರವು ಬಾಕಿ ಇದೆ. ಒಟ್ಟು ಗುರುತಿಸಿರುವ ಒತ್ತುವರಿ ಪ್ರಕರಣಗಳ ಪೈಕಿ ಮಂಗಳೂರು ತಾಲೂಕಿನ 163 ಪ್ರಕರಣಗಳಲ್ಲಿ 521.89 ಎಕರೆ(ತೆರವು ಮಾಡಿದ್ದು 148 ಪ್ರಕರಣ 262 ಎಕರೆ), ಬಂಟ್ವಾಳ 87 ಪ್ರಕರಣಗಳಲ್ಲಿ 139.21 ಎಕರೆ(ತೆರವು 29 ಪ್ರಕರಣ 42 ಎಕರೆ), ಮೂಡುಬಿದಿರೆ 18 ಪ್ರಕರಣಗಳಲ್ಲಿ 34.54(ತೆರವು 7 ಪ್ರಕರಣದಲ್ಲಿ 4 ಎಕರೆ), ಮೂಲ್ಕಿ 22 ಪ್ರಕರಣಗಳಲ್ಲಿ 13.13 ಎಕರೆ(ತೆರವು 4 ಪ್ರಕರಣಗಳಲ್ಲಿ 3 ಎಕರೆ), ಕಡಬದಲ್ಲಿ 271 ಪ್ರಕರಣಗಳಲ್ಲಿ 1177.78 ಎಕರೆ(ತೆರವು 132 ಪ್ರಕರಣಗಳಲ್ಲಿ 888.44 ಎಕರೆ), ಒತ್ತುವರಿ ತೆರವಿಗೆ ಗುರುತಿಸಲಾಗಿತ್ತು. ಈ ಮಧ್ಯೆ ಸುಳ್ಯದಲ್ಲಿ ಗುರುತಿಸಲಾದ ಒಟ್ಟು 110 ಪ್ರಕರಣಗಳಲ್ಲಿ 366.47 ಎಕರೆ ಭೂಮಿ ಇನ್ನೂ ತೆರವು ಮಾಡಿಲ್ಲ.
ಪುತ್ತೂರು-ಬೆಳ್ತಂಗಡಿ ಪೂರ್ಣ ತೆರವು: ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಎಲ್ಲ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಅಂದರೆ, ಪುತ್ತೂರಿನಲ್ಲಿ ಒಟ್ಟು 34 ಪ್ರಕರಣದಲ್ಲಿ 101.18 ಎಕರೆ ಹಾಗೂ ಬೆಳ್ತಂಗಡಿಯಲ್ಲಿ ಒಟ್ಟು 77 ಪ್ರಕರಣಗಳಲ್ಲಿ 113.17 ಎಕರೆ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ವಸತಿ ಸಹಿತ ವಿವಿಧ ಯೋಜನೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಜಮೀನಿನ ಕೊರತೆ ಇದೆ ಎಂಬ ಕೂಗು ಕೇಳಿಬರುತ್ತಿದೆ. ಆದರೂ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಆಕ್ರಮಣ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಒತ್ತುವರಿ ತೆರವಿಗೆ ಮುಂದಾಗಿದೆ.
ಕಾರ್ಯಪಡೆ ರಚನೆ: ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಕಾರ್ಯಪಡೆ ರಚಿಸಲಾಗಿದೆ. ಅದರಂತೆ ಎಲ್ಲ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡಿದ್ದು, ಸರ್ಕಾರಿ ಜಮೀನು ತೆರವು ಸಂಬಂಧ ಕ್ರಮ ಕೈಗೊಂಡಿದ್ದಾರೆ.
ಸರ್ಕಾರಿ ಜಮೀನು ತೆರವಿಗೆ ಬಾಕಿ: ತಾಲೂಕು ಪ್ರಕರಣ ಎಕರೆ ಮಂಗಳೂರು 15 259.49 ಬಂಟ್ವಾಳ 58 96.25 ಮೂಡುಬಿದಿರೆ 11 30.03 ಮೂಲ್ಕಿ 18 9.97 ಕಡಬ 139 289.34 ಸುಳ್ಯ 110 366.47 ಒಟ್ಟು 351 1051.55
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಪ್ರಕ್ರಿಯೆ ನಡೆಯುತ್ತಿದೆ. ಈವರೆಗೆ 1415.82 ಎಕರೆ ಜಮೀನು ತೆರವು ಮಾಡಲಾಗಿದೆ. ಬಾಕಿ ಪ್ರಕರಣಗಳಲ್ಲಿಯೂ ಸದ್ಯದಲ್ಲೇ ಕ್ರಮ ವಹಿಸಲಾಗುವುದು. ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತುಸು ಹಿನ್ನಡೆಯಾಗಿದೆ. ಡಾ.ರಾಜೇಂದ್ರ ಕೆ.ವಿ ಜಿಲ್ಲಾಧಿಕಾರಿ ದ.ಕನ್ನಡ