

ಗೋಕರ್ಣ: ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗಿನ ಜಾವ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಮಹಾಶಿವರಾತ್ರಿ ಜಾತ್ರೆ ಪೇಟೆಯಲ್ಲಿ ಬಟ್ಟೆ ಅಂಗಡಿ ಇಟ್ಟಿದ್ದ ಜಾರ್ಖಂಡ ರಾಜ್ಯದ ಪ್ರೈರ್ಸಾ ಗ್ರಾಮದ ಮಹಮ್ಮದ ರಫೀಕ್ ಜಹಾಂಗೀರ(37) ಎನ್ನುವ ವ್ಯಾಪಾರಿ ಶನಿವಾರ ಸಂಜೆ ವ್ಯಾಪಾರದ ವೇಳೆ ಮೂಗಿನಿಂದ ಉಂಟಾದ ತೀವ್ರ ರಕ್ತ ಸ್ರಾವದಿಂದ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾನೆ.
ಇನ್ನೊಂದು ಘಟನೆಯಲ್ಲಿ ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೈಕ್ ಮೇಲೆ ಗೋಕರ್ಣಕ್ಕೆ ಬರುತ್ತಿದ್ದ ಯುವಕನೊಬ್ಬ ಇಲ್ಲಿನ ಚೌಡಗೆರೆ ಬಳಿ ರಸ್ತೆ ಪಕ್ಕದ ತಗ್ಗಿನಲ್ಲಿ ಬೈಕ್ ಅಪಘಾತಗೊಂಡು ಮರದ ಅಡಿಗೆ ಬೈಕ್ ಸಿಲುಕಿ ಸಾವಿಗೀಡಾಗಿದ್ದಾನೆ. ಮೃತನನ್ನು ಟೈಲ್ಸ್ ಜೋಡಣೆ ಕೆಲಸ ಮಾಡುತ್ತಿದ್ದ ಮೂಲತಃ ಶಿರಸಿ ಕಸ್ತೂರ ಬಾ ನಗರದ, ಹಾಲಿ ಭಟ್ಕಳ ನವಾಯತ್ ಕಾಲನಿ ನಿವಾಸಿ ಅಕ್ರಂ ರಿಜ್ವಾನ್ ಬೆಟಗೇರಿ(24) ಎಂದು ಗುರುತಿಸಲಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.