ಬೆಳ್ತಂಗಡಿಯ ಗರ್ಡಾಡಿ ಬಳಿ ಕಾರು-ಬಸ್ ಡಿಕ್ಕಿಯಾಗಿ ಇಬ್ಬರು ಮೃತ್ಯು

IMG-20230101-WA0050
Published on

ಬೆಳ್ತಂಗಡಿ: ಗುರುವಾಯನಕೆರೆ-ವೇಣೂರು ರಸ್ತೆಯ ಗರ್ಡಾಡಿ ಬಳಿಯ ಗೋಳಿಯಂಗಡಿಯಲ್ಲಿ ಇನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ, ಮಂಗಳೂರು ತಾಲೂಕು ಗಂಜಿಮಠ ಬಲ್ಗುಲಿಪಾಡಿ ದಾರುಲ್ ಕರಾಮ ನಿವಾಸಿ ಸೂರಲ್ಪಾಡಿ ನೌಶಾದ್ ಹಾಜಿ(ಅಬ್ದುಲ್ ಹಮೀದ್ ಎನ್) ಮತ್ತು ಅವರ ವಾಹನ ಚಾಲಕ ಮಂಗಳೂರು ತಾಲೂಕು ಉಳಾಯಿಬೆಟ್ಟು ಆಚೆಬೆಟ್ಟು ನಿವಾಸಿ ಮುಹಮ್ಮದ್ ಮುಶ್ರಫ್(20) ಮೃತರು. ಮೃತ ನೌಶಾದ್ ಹಾಜಿ ಮೂಲತಃ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿ. ಇಂಜಿನಿಯರ್ ಆಗಿರುವ ಅವರು, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷರಾಗಿದ್ದರು. ನಂಡೆ ಪೆಂಜಳ್ ಅಭಿಯಾನದ ಸ್ಥಾಪಕಾಧ್ಯಕ್ಷರಾಗಿದ್ದರು. ಬೆಳ್ತಂಗಡಿಯ ದಾರುಸ್ಸಲಾಂ ಎಜುಕೇಶನ ಸೆಂಟರ್ ಕೋಶಾಧಿಕಾರಿ, ಮೂಡುಬಿದಿರೆ ಕಾಶಿಪಟ್ಟದ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾರ್ಯದರ್ಶಿ, ಗುರುಪುರ ಮದ್ರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಬೆಳ್ತಂಗಡಿಯ ದಾರುಸ್ಸಲಾಂ ಸಂಸ್ಥೆ ವತಿಯಿಂದ ಆರಂಭಿಸಿದ ಹಜ್ ಟೂರ್ ಲಾಲದ ಕಚೇರಿ ಉದ್ಘಾಟನೆಗೆ ಆಗಮಿಸುತ್ತಿದ್ದರು. ಶನಿವಾರ ರಾತ್ರಿಯೂ ಅಡ್ಕ ಬೈಕಂಪಾಡಿ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪತ್ನಿ, ಐವರು ಮಕ್ಕಳನ್ನು ಅಗಲಿದ್ದಾರೆ.

ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಶವಾಗಾರದ ಬಳಿ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಮೃತದೇಹ ವೀಕ್ಷಿಸಿದರು. ದಾರುಸ್ಸಲಾಂ ಸಂಸ್ಥೆ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರ ತಂಙಳ್ ಆಗಮಿಸಿ ದುವಾ ನೆರವೇರಿಸಿ, ಮೃತರ ಬಂಧುಗಳಿಗೆ ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net