

ಶಿವಮೊಗ್ಗ: ತಾಲೂಕಿನ ಗಾಜನೂರು ಅಗ್ರಹಾರದ ಬಳಿ ಬುಧವಾರ ಬೆಳಗಿನ ಜಾವ ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಖಾಸಗಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ನಿರ್ವಾಹಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 13 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹೊಸನಗರ ತಾಲೂಕಿನ ನಿವಾಸಿ, ಬಸ್ ನಿರ್ವಾಹಕ ಅಣ್ಣಪ್ಪ(35) ಮತ್ತು ಚಳ್ಳಕೆರೆಯ ಪ್ರಯಾಣಿಕ ಹರ್ಷಿತ್(25) ಮೃತರು. ಖಾಸಗಿ ಬಸ್ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿತ್ತು. ಇದೇ ವೇಳೆ ಮಾರ್ಗಮಧ್ಯೆ ಆಂಧ್ರಪ್ರದೇಶ ಮೂಲದ ಲಾರಿ ಕೆಟ್ಟು ನಿಂತಿತ್ತು. ವೇಗವಾಗಿ ಬಂದ ಬಸ್ ರಸ್ತೆ ಬದಿ ನಿಂತಿದ್ದ ಲಾರಿಯನ್ನು ಹಿಂದಿಕ್ಕುವ ರಭಸದಲ್ಲಿ ಎದುರಿನಿಂದ ಬಂದ ವಾಹನ ತಪ್ಪಿಸಲು ಚಾಲಕ ಬಸ್ಸನ್ನು ಎಡಬದಿಗೆ ಚಲಾಯಿಸಿದಾಗ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ 13 ಜನ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಸೇರಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಉಮೇಶ್(50), ಪ್ರಸಾದ್(40), ವಿಷ್ಣು(21), ಮಂಜುನಾಥ್(45), ಸುಜಾತಾ(40), ಆನಂದ್ ನಾಯ್ಕ(50), ನೀಲಾಂಬಿಕಾ(45), ಪ್ರಸಾದ್(43), ಬಿಂದು(20), ಶಶಾಂಕ್(20), ಲಕ್ಷ್ಮೀ(35), ಶ್ರೀರಾಮುಲು(42), ಕಾರ್ತಿಕ್(32) ಎಂಬುವರು ಗಾಯಗೊಂಡಿದ್ದಾರೆ. ಅಪಘಾತದಿಂದ ತೀರ್ಥಹಳ್ಳಿ-ಶಿವಮೊಗ್ಗ ನಡುವೆ ರಸ್ತೆ ಸಂಚಾರಕ್ಕೆ ಕೆಲ ಕಾಲ ಅಡಚಣೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ತುಂಗಾನಗರ ಠಾಣೆ ಪೊಲೀಸರು, ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.