ಅಂತರಜಿಲ್ಲಾ ಬೈಕ್ ಕಳ್ಳರಿಬ್ಬರ ಬಂಧನ

shikaripura police station
ಶಿಕಾರಿಪುರ ಟೌನ್ ಠಾಣೆ ಪೊಲೀಸರು ಅಂತರಜಿಲ್ಲಾ ಕಳ್ಳರಿಂದ 16 ಬೈಕ್‌ಗಳನ್ನು ವಶಪಡಿಸಿಕೊಂಡರು. ಡಿವೈಎಸ್‌ಪಿ ಕೇಶವ್, ಸಂತೋಷ್ ಪಾಟೀಲ್, ಶರತ್ ಇದ್ದರು.
Published on

ಶಿವಮೊಗ್ಗ: ರಾಜ್ಯದ ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಬೈಕ್ ಕಳ್ಳರಿಬ್ಬರನ್ನು ಬಂಧಿಸಿರುವ ಶಿಕಾರಿಪುರ ಠಾಣೆ ಪೊಲೀಸರು, ಆರೋಪಿಗಳಿಂದ ಬರೋಬ್ಬರಿ 20.50 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ದೊಡ್ಡಲಿಂಗೇನಹಳ್ಳಿಯ ಪ್ರತಾಪ್(33) ಮತ್ತು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿಳಚೋಡ್ ಗ್ರಾಮದ ಬೋಜರಾಜ(32) ಬಂಧಿತರು.

ಏ.5ರಂದು ಶಿಕಾರಿಪುರ ಟೌನ್ ಠಾಣೆ ವ್ಯಾಪ್ತಿ ಸುಬೇದಾರ್ ಕೇರಿಯ ಫೈಜಾನ್ ಭಾಷಾ ಅವರ ಬಜಾಜ್ ಪಲ್ಸರ್ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿವೈಎಸ್‌ಪಿ ಕೇಶವ್ ಮತ್ತು ವೃತ್ತ ನಿರೀಕ್ಷಕ ಸಂತೋಷ್ ಪಾಟೀಲ್ ಮೇಲ್ವಿಚಾರಣೆಯಲ್ಲಿ ಟೌನ್ ಠಾಣೆ ಪಿಎಸ್‌ಐ ಶರತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ತರೀಕೆರೆ ಠಾಣೆ ವ್ಯಾಪ್ತಿಯಲ್ಲಿ 2, ಶಿಕಾರಿಪುರ ಟೌನ್, ಅರಸೀಕೆರೆ, ಚನ್ನರಾಯಪಟ್ಟಣ, ಶಿರಾ, ಚಿತ್ರದುರ್ಗ, ಜಗಳೂರು, ಕೂಡ್ಲಿಗಿ, ಕೊಟ್ಟೂರು, ಹಗರೀಬೊಮ್ಮನಹಳ್ಳಿ, ಹೊಸಪೇಟೆ, ಬೆಂಡೆಗೇರೆ, ಮುನಿರಾಬಾದ್, ಮುಂಡರಗಿ ಮತ್ತು ಹೂವಿನಹಡಗಲಿ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್‌ಗಳನ್ನು ಕಳವು ಮಾಡಿರುವುದು ತನಿಖೆಯಿಂದ ಬಯಲಾಗಿದೆ.

ಕಾರ್ಯಾಚರಣೆಯಲ್ಲಿ ಶಿಕಾರಿಪುರ ಟೌನ್ ಠಾಣೆ ಎಎಸ್‌ಐಗಳಾದ ಮಲ್ಲೇಶಪ್ಪ, ವಿಶ್ವನಾಥ್, ಮುಖ್ಯಪೇದೆಗಳಾದ ಸಂದೀಪ್, ಗಂಗಾಧರ್, ಪೇದೆಗಳಾದ ಶಿವಾಜಿ, ಗಿರೀಶ್, ಕೊಟ್ರೇಶ್, ಕುಮಾರ್, ಗಜೇಂದ್ರ, ವಿಜಯ್, ಚೇತನ್, ನಾಗರಾಜ್, ನವೀನ್, ರಾಜ್‌ಕುಮಾರ್, ಜಯಶೀಲಾ, ವೀರೇಶ್ ಹಾಗೂ ತಾಂತ್ರಿಕ ವಿಭಾಗದ ಮುಖ್ಯ ಪೇದೆ ಇಂದ್ರೇಶ್ ಮತ್ತು ಕೃಷ್ಣಪ್ಪ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net