

ಮಂಗಳೂರು: ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೆ ಘರ್ಷಣೆ ಆರಂಭವಾಗಿದೆ. ಗುರುವಾರ ರಾತ್ರಿ ಸುರತ್ಕಲ್‌ನ ಕಾನಾದ ಬಳಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಇಬ್ಬರಿಗೆ ಚೂರಿ ಇರಿತವಾಗಿದೆ. ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಮುಕ್ಷಿದ್ (28) ಹಾಗೂ ನಿಜಾಮ್ (24) ಚೂರಿ ಇರಿತಕ್ಕೊಳಗಾದವರು.
ಸುರತ್ಕಲ್, ಕಾನ, ಕಟ್ಲ ಮನೆ ಸುಶಾಂತ್ ಯಾನೆ ಕಡವಿ (29), ಕಾನಾ ಕಟ್ಲ ಬೈಕಲ ಮನೆ ಕೆ.ವಿ. ಅಲೆಕ್ಸ್ (27), ಸುರತ್ಕಲ್ ಇಂದಿರಾ ಕಟ್ಟೆಯ ನಿತಿನ್ (26) ಹಾಗೂ ಕುಳಾಯಿಗುಡ್ಡೆ ಅರುಣ್ ಶೆಟ್ಟಿ (56) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಗುರುರಾಜ್ ಆಚಾರಿ ಹಾಗೂ ಆರೋಪಿಗಳಿಗೆ ಅರುಣ್ ಶೆಟ್ಟಿಯೊಂದಿಗೆ ಆಶ್ರಯ ನೀಡಿದ ಅಶೋಕ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಘಟನೆ ವಿವರ: ನಿಜಾಮ್, ಮುಕ್ಷಿದ್ ಹಾಗೂ ಇತರರು ಸುರತ್ಕಲ್‌ನಲ್ಲಿರುವ ಬಾರೊಂದಕ್ಕೆ ಮದ್ಯ ಸೇವನೆಗೆ ಬಂದಿದ್ದರು. ಇವರು ಮದ್ಯ ಸೇವಿಸುತ್ತಿದ್ದಾಗ ಅಲ್ಲಿಯೇ ಬೇರೊಂದು ಟೇಬಲ್‌ನಲ್ಲಿದ್ದ ನಾಲ್ವರ ತಂಡದ ಜತೆ ಜಗಳವಾಗಿದೆ. ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಬಾರ್ ಸಿಬ್ಬಂದಿ ಎರಡೂ ತಂಡಗಳನ್ನು ಹೊರಗೆ ಕಳುಹಿಸಿದ್ದಾರೆ. ಬಾರ್‌ನಿಂದ ಹೊರ ಬಂದ ಬಳಿಕವೂ ಪರಸ್ಪರ ಹೊಡೆದಾಟ ನಡೆದಿದೆ. ಈ ವೇಳೆ ಓರ್ವ ಚೂರಿಯಿಂದ ಇರಿದಿದ್ದಾನೆ.
ನಿಜಾಮ್‌ನ ಹೊಟ್ಟೆ ಮತ್ತು ಕಿವಿಯ ಭಾಗಕ್ಕೆ ಚೂರಿ ಇರಿತವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಡೆದಾಟದ ಸಂದರ್ಭ ಅಡ್ಡ ಬಂದ ಮುಕ್ಷಿದ್ ಕೈಗೆ ಚೂರಿ ತಾಗಿ ಗಾಯವಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ. ನೇತೃತ್ವದಲ್ಲಿ ಪಿಎಸ್‌ಐಗಳಾದ ರಾಘವೇಂದ್ರ ನಾಯ್ಕ, ಜನಾರ್ದನ ನಾಯ್ಕ, ಶಶಿಧರ ಶೆಟ್ಟಿ, ಎಎಸ್‌ಐಗಳಾದ ರಾಜೇಶ್ ಆಳ್ವ, ತಾರಾನಾಥ, ರಾಧಾಕೃಷ್ಣ, ಸಿಬ್ಬಂದಿಗಳಾದ ಅಣ್ಣಪ್ಪ, ಉಮೇಶ್ ಕುಮಾರ್, ತಿರುಪತಿ, ಅಜಿತ್ ಮ್ಯಾಥ್ಯೂ, ರಾಮು ಕೆ., ಕಾರ್ತಿಕ್, ವಿನೋದ್, ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ವಿಶೇಷ ಕಾರ್ಯಪಡೆ ತಂಡ, ಶ್ವಾನದಳ ಭಾಗವಹಿಸಿದ್ದರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸುರತ್ಕಲ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ.