

ಹೂವಿನಹಡಗಲಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಮಳೆಯಾಗಿದ್ದು, ಎರಡು ಮನೆಗಳು ಭಾಗಶಃ ಕುಸಿದಿವೆ.
ಸಂಜೆಯಿಂದಲೇ ತಂಪು ವಾತಾವರಣ ಸೃಷ್ಟಿಯಾಗಿತ್ತು. ರಾತ್ರಿ 9.30ರ ನಂತರ ಸುರಿದ ಮಳೆ ನಿರಂತರವಾಗಿ ಮಧ್ಯರಾತ್ರಿಯವರೆಗೂ ಸುರಿದಿದೆ. ಮಳೆಯಿಂದ ತಾಲೂಕಿನ ದಾಸರಹಳ್ಳಿ ಹಾಗೂ ದೇವಗೊಂಡನಹಳ್ಳಿಯಲ್ಲಿ ತಲಾ ಒಂದು ಮನೆಗಳು ಭಾಗಶಃ ಕುಸಿದಿವೆ.
ಪಟ್ಟಣದ ಕೋರ್ಟ್ ಆವರಣ ಮಳೆಯಿಂದ ಸಂಪೂರ್ಣ ಜಲಾವೃತವಾಗಿತ್ತು. ಸಾರ್ವಜನಿಕರು, ವಕೀಲರು ನೀರಿನಲ್ಲಿಯೇ ನ್ಯಾಯಾಲಯ ಪ್ರವೇಶಿಸಿದರು. ರಸ್ತೆಗಳ ತಗ್ಗು ಪ್ರದೇಶದಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ರೈತರು ರಸ್ತೆಯಲ್ಲಿ ರಾಶಿ ಹಾಕಿದ್ದ ಧಾನ್ಯಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು.