ಮಳೆ ಆರ್ಭಟಕ್ಕೆ ಎರಡು ಮನೆಗಳು ಕುಸಿತ

mdg collapse
ಮೂಡಿಗೆರೆ ತಾಲೂಕಿನ ದೋಣಗೂಡು ಗ್ರಾಮದ ತೀರ್ಥ ಎಂಬುವರ ಮನೆ ಭಾಗಶಃ ಕುಸಿದಿದೆ.
Published on

ಮೂಡಿಗೆರೆ: ತಾಲೂಕಿನಲ್ಲಿ ಶುಕ್ರವಾರವೂ ಮಳೆ ಆರ್ಭಟ ಮುಂದುವರಿದು ವಿವಿಧೆಡೆ ಮನೆ ಕುಸಿದಿವೆ. ನದಿ, ಹಳ್ಳ ಕೊಳ್ಳಗಳಲ್ಲಿ ನೀರು ಉಕ್ಕಿ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಲ್ಲಿ ಹರಿಯುತ್ತಿದೆ.

ಗುರುವಾರ ರಾತ್ರಿ ಸುರಿದ ಮಳೆಗೆ ಕಿರುಗುಂದ ಗ್ರಾಪಂ ದೋಣುಗೂಡು ಗ್ರಾಮದ ತೀರ್ಥ ಹಾಗೂ ಕಿರುಗುಂದ ಗ್ರಾಮದ ವಿನಯ್‌ಕುಮಾರ್ ಎಂಬುವರ ಮನೆ ಭಾಗಶಃ ಕುಸಿದಿವೆ. ದೋಣುಗೂಡು ಗ್ರಾಮದಲ್ಲಿ ತೀರ್ಥ ಎಂಬುವರ ಮನೆ ಕುಸಿದಾಗ ಕುಟುಂಬದ 4 ಮಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ಕಂದಾಯ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತ ಸುಂದ್ರೇಶ್ ಹೊಯ್ಸಳಲು ಸ್ಥಳಕ್ಕೆ ಭೇಟಿ ನೀಡಿದ್ದರು.
ಬೈದುವಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಊರುಬಗೆ, ಬೈದುವಳ್ಳಿ, ಬಾಳೂರು, ಬೈರಾಪುರ, ಗೌಡಳ್ಳಿ ಸೇರಿದಂತೆ ಅನೇಕ ಭಾಗಗಳಲ್ಲಿ ಹೇಮಾವತಿ ನದಿ, ಹಳ್ಳ, ಕೆರೆಗಳು ತುಂಬಿ ಭತ್ತದ ಗದ್ದೆ ಹಾಗೂ ತೋಟಗಳಲ್ಲಿ ಹರಿಯಲಾರಂಭಿಸಿವೆ.
ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 6 ಮನೆ ಕುಸಿದಿವೆ. ಹಲವು ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗಾಗಲೇ ತಾಲೂಕಿನಲ್ಲಿ 30ಕ್ಕೂ ಅಧಿಕ ಮನೆಗಳು ಕುಸಿದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net