

ಮುಳಬಾಗಿಲು: ಗಾಂಧಿಜಯಂತಿಯಂದು ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಮುಳಬಾಗಿಲು ತಾಲೂಕು ಯಳಚೇಪಲ್ಲಿ ಗ್ರಾಮದ ಧನ್ಯಾಬಾಯಿ (13) ಮತ್ತು ಚೈತ್ರಾಬಾಯಿ (13) ಮೃತ ಮಕ್ಕಳು.
ಅದೇ ಗ್ರಾಮದಲ್ಲಿ ಇಬ್ಬರು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಚೈತ್ರಾಬಾಯಿಗೆ ತಾಯಿ ಇಲ್ಲ. ತಂದೆ ಆಕೆಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಮಾವ ರಾವೇಂದ್ರ ಎಂಬುವವರು ಮಗಳಂತೆ ಸಾಕಿ ಸಲಹುತ್ತಿದ್ದರು. ಧನ್ಯಾಬಾಯಿ ತಂದೆ ಈಶ್ವರ್ರಾವ್, ತಾಯಿ ಗಾಯತ್ರಿಬಾಯಿ ಕೂಲಿ ಕಾರ್ಮಿಕಾರ್ಮಿಕರಾಗಿದ್ದು, ಮಗಳನ್ನು ಓದಿಸಿ ಉನ್ನತ ಶಿಕ್ಷಣ ಕೊಡಿಸಬೇಕೆಂಬ ಕನಸು ಕಂಡಿದ್ದರು.
ಅ.2ರ ಗಾಂಧಿ ಜಯಂತಿ ಅಂಗವಾಗಿ ಶಾಲೆಗೆ ಹೋಗಿ ಮನೆಗೆ ವಾಪಸ್ ಬಂದು ಮನೆ ಮುಂದೆ ಆಟವಾಡುತ್ತಿದ್ದರು. ಧನ್ಯಾಬಾಯಿ ತಾಯಿಗೆ ಶೌಚಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದಾಳೆ. ಜತೆಗೆ ಚೈತ್ರಾಬಾಯಿಯೂ ಹೋಗಿದ್ದಳು. ಆದರೆ, ಸಂಜೆಯಾದರೂ ವಾಪಸ್ ಬಾರದ ಕಾರಣ ಆತಂಕಗೊಂಡ ಪಾಲಕರು ಸುತ್ತಮುತ್ತ ಹುಡುಕಿದರು. ಎಲ್ಲೂ ಕಾಣದಿದ್ದಾಗ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಂದೇ ದೂರು ದಾಖಲಿಸಿದರು. ಪೊಲೀಸರು ಕೂಡ ಶೋಧದಲ್ಲಿರುವಾಗಲೇ ಶನಿವಾರ ಯಳಚೇಪಲ್ಲಿಯಿಂದ ಕುಪ್ಪಂಪಾಳ್ಯಕ್ಕೆ ಹೋಗುವ ಮಾರ್ಗಮಧ್ಯದ ರ್ನಿಜನ ಪ್ರದೇಶದ ಬಾವಿಯೊಂದರಲ್ಲಿ ದಾರಿಹೋಕರಿಗೆ ಇಬ್ಬರು ಹೆಣ್ಣುಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಿಯರು ಮಕ್ಕಳನ್ನು ಗುರುತು ಹಿಡಿದು ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ಮಕ್ಕಳನ್ನು ಯಾರೋ ಕೊಲೆ ಮಾಡಿ ತಂದು ಬಾವಿಯಲ್ಲಿ ಬಿಸಾಡಿದ್ದಾರೆ ಎಂದು ಮಕ್ಕಳ ಕುಟುಂಬಸ್ಥರು ದೂರಿದ್ದಾರೆ.
ಬೇರೆ ಕಡೆಯಿಂದ ಬಂದವರ ಮೇಲೆ ಅನುಮಾನ?: ದಸರಾ ಹಿನ್ನಲೆಯಲ್ಲಿ ಗ್ರಾಮಕ್ಕೆ ಬೆಂಗಳೂರು ಸೇರಿ ಬೇರೆ ಬೇರೆ ಭಾಗದಿಂದ ಜನ ಬಂದಿದ್ದರು. ಹಾಗಾಗಿ ಯಾರೋ ನಮ್ಮ ಮಕ್ಕಳನ್ನು ಕೊಲೆ ಮಾಡಿ ನಂತರ ಬಾವಿಯಲ್ಲಿ ಬಿಸಾಡಿದ್ದಾರೆ. ಮಕ್ಕಳ ಮುಖದ ಮೇಲೆ ಗಾಯದ ಗುರುತುಗಳಿವೆ. ಕಣ್ಣುಗಳು ಹೊರಗೆ ಬಂದಿವೆ ಎಂದು ಪಾಲಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ದುಷ್ಕರ್ಮಿಗಳ ಕೃತ್ಯ: ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆಯಂಥ ಯೋಚನೆಗಳು ಬಂದಿರುವುದಿಲ್ಲ, ಅಲ್ಲದೇ ಒಂದೇ ಬಾರಿಗೆ ಸಾಯುವುದಕ್ಕೂ ನಿರ್ಧಾರ ಮಾಡಿರುವುದಿಲ್ಲ. ಅವರು ಅಂಥ ಆಲೋಚನೆ ಮಾಡುವ ಮಕ್ಕಳೂ ಅಲ್ಲ, ಕೂಡಿ ಆಡಿಕೊಂಡು ಬೆಳೆಯುವ ಮಕ್ಕಳು. ಇವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬಾವಿಯಲ್ಲಿ ಎಸೆದಿರಬಹುದು ಎಂಬ ಅನುಮಾನ ದಟ್ಟವಾಗಿದ್ದು, ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀೆಗೆ ಕಳುಹಿಸಲಾಗಿದೆ. ಪಂಚನಾಮೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಬಿ.ನಿಖಿಲ್ಎಸ್ಪಿ