ಪ್ರತಿಷ್ಠಿತ ವಿಜ್ಞಾನಿಗಳ ಪಟ್ಟಿಯಲ್ಲಿ ವಿಎಸ್‌ಕೆಯುನ ಇಬ್ಬರಿಗೆ ಸ್ಥಾನ

BLY- 6-3
Published on

ಬಳ್ಳಾರಿ : ವಿಶ್ವದ ಪ್ರತಿಷ್ಠಿತ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ವಾರ್ಷಿಕವಾಗಿ ಪ್ರಕಟಿಸುವ ಜಗತ್ತಿನ ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.

ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ.ಕೆ.ವಿ.ಪ್ರಸಾದ್ ಮತ್ತು ಪ್ರೊ.ಹನುಮೇಶ್ ವೈದ್ಯ ಇವರಿಬ್ಬರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರೊ.ಕೆ.ವಿ.ಪ್ರಸಾದ್ ಅವರು ಪ್ರಸ್ತುತ ಕೊಪ್ಪಳ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶ್ವದರ್ಜೆಯ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ವೆಬ್ ಆಫ್ ಸೈನ್ಸ್, ಸ್ಕೋಪಸ್, ಗೂಗಲ್ ಸ್ಕಾಲರ್, ಎಚ್ ಇಂಡೆಕ್ಸ್, ಇಂಪ್ಯಾಕ್ಟ್ ಫ್ಯಾಕ್ಟರ್, ಸೈಟೇಷನ್ ಹೀಗೆ ಹಲವಾರು ಸಂಯೋಜಿತ ಮಾನದಂಡಗಳನ್ನು ಆಧರಿಸಿ ವಿಶ್ವದ ಉತ್ತಮ ಸಂಶೋಧಕರನ್ನು ಗುರುತಿಸಿ ವಾರ್ಷಿಕವಾಗಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಪಟ್ಟಿ ಬಿಡುಗಡೆ ಮಾಡುತ್ತದೆ.

ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಹೆಸರುವಾಸಿಯಾಗಿರುವ ಎಲ್ಸ್‌ವೀಯರ್ ಸಂಸ್ಥೆ ಸಹಭಾಗಿತ್ವದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಕಳೆದ ವಾರ ಪಟ್ಟಿ ಬಿಡುಗಡೆ ಮಾಡಿದೆ. ಪ್ರಪಂಚದ ಒಟ್ಟು ಸಂಶೋಧನಕಾರರಲ್ಲಿ ಶೇ.2 ರಷ್ಟು ಖ್ಯಾತನಾಮ ವಿಜ್ಞಾನಿಗಳನ್ನು ಸಂಶೋಧನೆಗೆ ಸಂಬಂಧಿಸಿದ ವಿವಿಧ ವರ್ಗಗಳಲ್ಲಿ ವಿಂಗಡಿಸಿ ಪಟ್ಟಿ ಅಂತಿಮಗೊಳಿಸಿದೆ.

ಇಬ್ಬರು ಪ್ರಾಧ್ಯಾಪಕರ ಸಾಧನೆಗೆ ಬಳ್ಳಾರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಾಹೇಬ್ ಅಲಿ ನಿರಗುಡಿ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ, ವಿಶ್ರೀಕೃವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಹಾಗೂ ಪ್ರಾಧ್ಯಾಪಕರುಗಳು, ಸಿಬ್ಬಂದಿ, ಕುಟುಂಬ ವರ್ಗ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net