

ಪ್ರಶಾಂತ ಭಾಗ್ವತ, ಉಡುಪಿ
ಮಳೆಗಾಲವೂ ಸೇರಿದಂತೆ ವರ್ಷಪೂರ್ತಿ ವಿಪರೀತ ಬಿಸಿಲೇ ಇರುವ ಕರಾವಳಿ ಜಿಲ್ಲೆ ಉಡುಪಿಯಲ್ಲಿ, ಗಡಗಡ ನಡುಕ ಹುಟ್ಟಿಸುವ ಕಾಶ್ಮೀರದಲ್ಲಷ್ಟೇ ಬದುಕುವ ಕೇಸರಿ ಬೆಳೆಯುವ ಮೂಲಕ ಗೆಳೆಯರಿಬ್ಬರು ಊಹಿಸಲಸಾಧ್ಯ ಸಾಧನೆ ಮಾಡಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎನ್ಐಸಿ (ನ್ಯಾಷನಲ್ ಇನ್ಫೋಮೆಟಿಕ್ ಸೆಂಟರ್)ಯಲ್ಲಿ ಇಬ್ಬರೂ ಗೆಳೆಯರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಆಹಾರ ವಿಭಾಗದಲ್ಲಿದ್ದ ಅನಂತಜಿತ್ ಅವರಿಗೆ ಕೃಷಿಯಲ್ಲಿ ಆಸಕ್ತಿ ಇತ್ತು. ಏನಾದರೂ ಮಾಡಬೇಕೆಂದು ಬಯಸಿ ಆನ್ಲೈನ್ ಮೂಲಕ 1 ಕೆಜಿ ಕೇಸರಿ ಗಡ್ಡೆ ತರಿಸಿ ತನ್ನ ತೋಟದಲ್ಲಿ ನೆಟ್ಟರು. ಆದರೆ, ಇಲ್ಲಿಯ ವಾತಾವರಣಕ್ಕೆ ಅದು ಹೂ ಬಿಡಲಿಲ್ಲ. ಹಾಗೆಂದು ಅವರು ಸುಮ್ಮನೆ ಕೂರಲಿಲ್ಲ.
ಛಲ ಬಿಡದ ಅನಂತಜಿತ್, ಬೆಳಗಾವಿಯಲ್ಲಿ ರಜತ್ ಎಂಬವರ ಬಳಿ ಕೇಸರಿ ಕೃಷಿಯ ಕುರಿತು ಸೂಕ್ತ ತರಬೇತಿ ಪಡೆದರು. ಅವರಿಂದಲೇ 50 ಕೆಜಿ ಕೇಸರಿ ಗಡ್ಡೆ ಖರೀದಿಸಿ, ತನ್ನೂರಲ್ಲಿ ಮತ್ತೆ ಕೇಸರಿ ಕೃಷಿ ಆರಂಭಿಸಿದರು. ಕಳೆದ ವರ್ಷವೇ ಆ ಗಡ್ಡೆಯಲ್ಲಿ ಅರಳಿ, ಪರಿಮಳ ಬೀರಿದ ಹೂವಿನಿಂದ 37 ಗ್ರಾಂ ಹಾಗೂ ಈ ವರ್ಷ 35 ಗ್ರಾಂ ಕೇಸರಿ ಉತ್ಪಾದಿಸಿದರು. 1 ಗ್ರಾಂಗೆ 400 ರೂ.ಗೆ ಮಾರಾಟ ಮಾಡಿದ್ದಾರೆ. ಮೊದಲನೇ ವರ್ಷ ಹೆಚ್ಚಿನ ಲಾಭ ಸಿಗದು. ಮೂರ್ನಾಲ್ಕು ವರ್ಷದ ಬಳಿಕ ಇರುವ ಗಡ್ಡೆಯ ಪ್ರಮಾಣ 4 ಪಟ್ಟು ಹೆಚ್ಚಾಗುತ್ತದೆ. ಬಳಿಕ ವರ್ಷದಿಂದ ವರ್ಷಕ್ಕೆ ಲಾಭವೂ ಹೆಚ್ಚಾಗುತ್ತಲೇ ಇರುತ್ತದೆ.
ಕೇಸರಿ ಬೆಳೆಯಲು ವಾತಾವರಣ ಪ್ರತಿಕೂಲ ಇರಬೇಕು. ಇದಕ್ಕೆ ನೀರು ಹಾಕುವಂತಿಲ್ಲ!. ನೀರಿನ ಬದಲಾಗಿ ನೀರಿನ ಹೊಗೆಯಿಂದ ಸಿಗುವ ತೇವಾಂಶ (ಮಿಸ್ಟ್) ಬೇಕಾಗುತ್ತದೆ. ಅದನ್ನು ಎರೋಪೋನಿಕ್ ಸಿಸ್ಟಮ್ ಎನ್ನುತ್ತಾರೆ. ಮನೆಯೊಳಗೇ ಕೋಲ್ಡ್ ರೂಮ್ ನಿರ್ಮಿಸಿ, ಪ್ರತಿ ತಿಂಗಳೂ ಸಹ ಅಗತ್ಯವಿರುವಷ್ಟು ಟೆಂಪ್ರೇಚರ್ ವ್ಯವಸ್ಥೆ ಮಾಡಿದ್ದಾರೆ. ಕೇಸರಿ ಗಡ್ಡೆಯು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಮಾತ್ರ ಹೂವು ಬಿಡುತ್ತದೆ. ನಂತರ ದಿನವೂ ಹೂವು ಕಿತ್ತು, ಹೂವಿನ ಮಧ್ಯಭಾಗದಲ್ಲಿರುವ ಎಳೆ (ಸ್ಟಿಗ್ಮಾ)ಯನ್ನು ತೆಗೆದು ಯಂತ್ರದ ಸಹಾಯದಿಂದ ಒಣಗಿಸುತ್ತಾರೆ. ಒಣಗಿದ ಸ್ಟಿಗ್ಮಾವೇ ಕೇಸರಿ. ಗಾಳಿ ತಾಗದಂತೆ ಅದನ್ನು ಗ್ಲಾಸ್ನ ಜಾರ್ನಲ್ಲಿ ಸಂಗ್ರಹಿಸಿಟ್ಟರೆ 6-7 ವರ್ಷ ಉತ್ತಮವಾಗಿರುತ್ತದೆ. ಆಸಕ್ತರಿಗೆ ಕೇಸರಿ ಬೆಳೆಯುವುದು ಹೇಗೆಂಬ ಮಾಹಿತಿ ಕೊಡಲೂ ಅನಂತಜಿತ್ (ಮೊ.ಸಂ. 9902518340) ಸಿದ್ಧರಿದ್ದಾರೆ.
ಇರುವ ಉದ್ಯೋಗದೊಂದಿಗೆ ಕೃಷಿಯನ್ನೂ ಉಪಕೆಲಸವಾಗಿ ಮಾಡಲು ಇದು ಪೂರಕ. ಕೃಷಿಯಲ್ಲಿ ಆಸಕ್ತಿಯಿದ್ದು, ಯಾರಿಗೆ ಜಮೀನು ಇರುವುದಿಲ್ಲವೋ ಅಂಥಹವರು ಮನೆಯ ಕೋಣೆ, ಮುಂಭಾಗವನ್ನೇ ಜಮೀನನ್ನಾಗಿ ಮಾಡಿಕೊಳ್ಳಬಹುದು. ಆದರೆ, ಇಂತಹ ಕಾರ್ಯ ಕೈಗೊಳ್ಳುವ ಮೊದಲು ಆಸಕ್ತಿ, ಅದನ್ನು ಪೂರ್ಣಗೊಳಿಸುವ ಛಲವಿದ್ದರೆ ಮಾತ್ರ ಯಶಸ್ಸು ಸಾಧ್ಯ. | ಅನಂತಜಿತ್ ತಂತ್ರಿ.