

ಶಿವಮೊಗ್ಗ: ಬೈಕ್‌ನಲ್ಲಿ ತೆರಳುತ್ತಿದ್ದ ಸ್ನೇಹಿತರಿಬ್ಬರ ಮೇಲೆ ಮತ್ತೊಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಗುಜರಿ ವ್ಯಾಪಾರಿ ಸೇರಿ ಇಬ್ಬರನ್ನು ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಆರ್‌ಎಂಎಲ್ ನಗರದ ಅಮ್ಜದ್ ಮತ್ತು ಶಾಹಿದ್ ಗಾಯಗೊಂಡವರು. ಅಮ್ಜದ್ ಗುಜರಿ ವ್ಯಾಪಾರಿಯಾಗಿದ್ದು, ಹಳೇ ವೈಷಮ್ಯದಿಂದ ಗುರುವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ. ಎನ್‌ಟಿ ರಸ್ತೆಯ ಫೌಂಡ್ರಿಯೊಂದರ ಹಿಂಭಾಗದಲ್ಲಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದು ಮನಸೋಇಚ್ಛೆ ಮಾರಕಾಸ್ತ್ರಗಳಿಂದ ಥಳಿಸಿದ್ದರು. ಇದರಿಂದ ಅಮ್ಜದ್ ಹೊಟ್ಟೆ, ಬೆನ್ನು ಭಾಗಕ್ಕೆ ತೀವ್ರವಾಗಿ ಗಾಯಗಳಾಗಿವೆ. ಜತೆಗೆ ಆತನ ಕೈ ಹಾಗೂ ಬೆರಳುಗಳು ತುಂಡಾಗಿವೆ. ಅಮ್ಜದ್ ಜತೆಗಿದ್ದ ಶಾಹಿದ್‌ಗೂ ಸಹ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರೂ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮ್ಜದ್ ಮೇಲೆ ಹಲ್ಲೆ ವಿಷಯ ತಿಳಿಯುತ್ತಿದ್ದಂತೆಯೇ ಆತನ ಕುಟುಂಬದವರು ಹಾಗೂ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ರಾತ್ರಿಯೇ ಜಮಾಯಿಸಿದ್ದರು. ಆಸ್ಪತ್ರೆಗೆ ಎಎಸ್‌ಪಿ ಸಿ.ಎ.ಕಾರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಮ್ಜದ್ ಮತ್ತು ಸ್ನೇಹಿತ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ತೀವ್ರಗೊಳಿಸಿ ಪ್ರಮುಖ ಆರೋಪಿ ಸೇರಿ ಐವರನ್ನು ಬಂಧಿಸಲಾಗಿದೆ. ಯಾವ ಕಾರಣಕ್ಕೆ ಕೃತ್ಯವೆಸಗಿದ್ದರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. - ಜಿ.ಕೆ.ಮಿಥುನ್‌ಕುಮಾರ್, ಎಸ್‌ಪಿ