ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!

Life threat
Published on

ವಿಜಯನಗರ: ಪ್ರಧಾನಿ ಸೇರಿ ಕೆಲವು ಜನಪ್ರತಿನಿಧಿಗಳಿಗೆ ಇತ್ತೀಚೆಗೆ ಕೊಲೆ ಬೆದರಿಕೆಗಳು ಬಂದಿದ್ದು, ಇದೀಗ 61ಕ್ಕೂ ಅಧಿಕ ಸಾಹಿತಿಗಳಿಗೆ ಜೀವ ಬೆದರಿಕೆಯ ಇರುವ ಪತ್ರವೊಂದು ರವಾನೆಯಾಗಿದೆ. ನಿಮ್ಮ ಮನೆಯಲ್ಲಿ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂಬುದಾಗಿ ಕೊಲೆ ಬೆದರಿಕೆ ಹಾಕಲಾಗಿದೆ.

ಹೀಗೆ ಇತ್ತೀಚೆಗೆ ಸುದ್ದಿಯಲ್ಲಿರುವ ಕುಂ.ವೀರಭದ್ರಪ್ಪ ಮತ್ತು ಇನ್ನು 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಇವರೆಲ್ಲ ಈ ಹಿಂದೆ ಮುಖ್ಯಮಂತ್ರಿಯವರಿಗೆ ಬರೆದ ಪತ್ರವೊಂದಕ್ಕೆ ಪ್ರತಿಯಾಗಿ ಕುಂ.ವೀರಭದ್ರಪ್ಪ ಮತ್ತು ಇತರ 61ಕ್ಕೂ ಅಧಿಕ ಸಾಹಿತಿಗಳನ್ನು ಉಲ್ಲೇಖಿಸಿ ಜೀವ ಬೆದರಿಕೆ ಹಾಕಲಾಗಿದೆ.

ಈ ಕೊಲೆ ಬೆದರಿಕೆಗೆ ಕಾರಣ ಒಂದೆರಡಲ್ಲ. ಹಿಜಾಬ್ ಪರವಾಗಿ, ಮುಸ್ಲಿಂ ಪರವಾಗಿ ಹಾಗೂ ಭಗವದ್ಗೀತೆ ವಿರುದ್ಧವಾಗಿ ನೀವು ಮತ್ತು 61 ಎಡಬಿಡಂಗಿ ಸಾಹಿತಿಗಳು ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ ಎಂದು ತಿಳಿಸಲಾಗಿದೆ.

ಸಾಹಿತಿ ಕುಂ.ವೀರಭದ್ರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಮತ್ತು 61ಕ್ಕೂ ಅಧಿಕ ಎಡಬಿಡಂಗಿ ಸಾಹಿತಿಗಳೇ.. ನಿಮ್ಮ ನಿಮ್ಮ ಮನೆಯಲ್ಲಿ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿ ಎಂಬುದಾಗಿ ಸಹಿಷ್ಣು ಹಿಂದು ಎನ್ನುವ ಹೆಸರಿನಲ್ಲಿ 2 ಪುಟಗಳ ಪತ್ರ ಬರೆಯಲಾಗಿದೆ.

ಕುಂ.ವೀರಭದ್ರಪ್ಪ ಅವರಿಗೆ ಭದ್ರಾವತಿಯಿಂದ ಈ ಪತ್ರ ಬಂದಿದ್ದು, ಅವರು ಇತ್ತೀಚೆಗೆ ನಾನು ಹಿಂದು ಅಲ್ಲ, ಲಿಂಗಾಯತ ಮಾತ್ರ ಎಂದು ನೀಡಿರುವ ಹೇಳಿಕೆಯನ್ನು ವಿರೋಧಿಸಿ ಈ ಜೀವಬೆದರಿಕೆ ಪತ್ರ ಬರೆಯಲಾಗಿದೆ. ಸೋಮವಾರ ಈಕುರಿತು ಅವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net