

ಮಂಗಳೂರು : ಸಮುದ್ರದಲ್ಲಿ ಮೀನುಗಾರಿಕೆ ತೆರಳಿದ್ದ ನಾಡದೋಣಿ ತೋಟ ಬೆಂಗ್ರೆ ಅಳಿವೆಬಾಗಿಲಿನಲ್ಲಿ ಗುರುವಾರ ರಾತ್ರಿ ಮಗುಚಿ ಬಿದ್ದು ಇಬ್ಬರು ಮೀನುಗಾರರು ನೀರು ಪಾಲಾಗಿದ್ದಾರೆ.
ತೋಟಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೀನು ಹಿಡಿಯುತ್ತಿದ್ದಾಗ ಜೋರಾದ ಗಾಳಿ ಮಳೆಯಿಂದ ದೋಣಿ ಮಗುಚಿದ್ದು, ಅದರಲ್ಲಿದ್ದ ಇಬ್ಬರು ಸಮುದ್ರ ಪಾಲಾಗಿ ನಾಪತ್ತೆಯಾಗಿದ್ದಾರೆ. ತೋಟ ಬೆಂಗ್ರೆ ನಿವಾಸಿಗಳಾದ ಯಶವಂತ (52), ಕಮಲಾಕ್ಷ(47) ಎಂಬವರು ನೀರುಪಾಲಾದವರು.
ಇವರ ಜತೆಗೆ ಇತರ ದೋಣಿಯವರೂ ಇದ್ದು, ಅವರು ಹಿಂತಿರುಗಿದ್ದರು. ಮೀನಿಗೆ ಹಾಕಿದ್ದ ಬಲೆ ಎಳೆದು ಬರುವಾಗ ತಡವಾಗಿದ್ದು, ಈ ಸಂದರ್ಭ ಇತರ ದೋಣಿಯವರು ಮರಳಿದ್ದರು. ಅಳಿವೆಬಾಗಿಲಿನಲ್ಲಿ ಸಮುದ್ರದ ಪ್ರಕ್ಷುಬ್ಧತೆಗೆ ಮಗುಚಿ ಬಿದ್ದಿದೆ. ಡ್ಯಾಂಗಳ ನೀರು ಬಿಟ್ಟಿರುವುದು ಹಾಗೂ ಮಳೆ ನೀರು ಸಮುದ್ರ ಸೇರುತ್ತಿರುವುದರಿಂದ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಹಾಗಾಗಿ ಸಮುದ್ರಕ್ಕಿಳಿದು ಹುಡುಕಾಟ ಅಸಾಧ್ಯವಾಗಿದೆ. ಸಮುದ್ರ ಬದಿಯಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದು, ಶುಕ್ರವಾರ ಸಂಜೆಯ ತನಕ ಪತ್ತೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೀನುಗಾರಿಕೆಗೆ ಬಳಸಿದ್ದ ನಾಡದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೆ ಸಮೀಪ ದಡಕ್ಕೆ ಬಂದು ಬಿದ್ದಿದೆ. ದೋಣಿ ಇನ್ನೂ ಪ್ತಯಾಗಿಲ್ಲ. ಸ್ಥಳೀಯ ಗ್ರಾಮಸ್ಥರು ನಾಪತ್ತೆಯಾದವರ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ. ಮಳೆಯಿಂದಾಗಿ ಮೀನುಗಾರಿಗೆ ನಡೆಸಬಾರದು, ನದಿ ತೀರಕ್ಕೆ ಜನರು ತೆರಳಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ, ಮೀನುಗಾರರು ದುಸ್ಸಾಹಸಕ್ಕಿಳಿದು ಅಪಾಯ ತಂದೊಡ್ಡಿಕೊಂಡಿದ್ದಾರೆ. ಕಮಲಾಕ್ಷ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಹಾಗೂ ಯಶವಂತ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.