ಕಾರು ಡಿಕ್ಕಿಯಾಗಿ ಇಬ್ಬರು ಸಹ ಶಿಕ್ಷಕಿಯರ ದುರ್ಮರಣ

ಶಿಕ್ಷಕಿ ನಾಗರತ್ನಾ
SRP_07-Nagarathna(34)-03jpg
Published on

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮ ಸಮೀಪದ ಶ್ರೀರಂಗಪಟ್ಟಣ-ಕೆಆರ್‌ಎಸ್ ಹೆದ್ದಾರಿಯಲ್ಲಿ ಭಾನುವಾರ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಹ ಶಿಕ್ಷಕಿಯರು ಮೃತಪಟ್ಟಿದ್ದಾರೆ.

ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮಂಜುಳಾ (39) ಹಾಗೂ ಬಸ್ತೀಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಾಗರತ್ನಾ (34) ಅಪಘಾತದಲ್ಲಿ ಮೃತಪಟ್ಟವರು.

ಶ್ರೀರಂಗಪಟ್ಟಣ ಕಾವೇರಿ ಶಾಲೆಯಲ್ಲಿ ಭಾನುವಾರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ನಡೆದಿದ್ದು, ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರಾಗಿ ಈ ಇಬ್ಬರೂ ಶಿಕ್ಷಕಿಯರು ಕಾರ್ಯನಿರ್ವಹಿಸಿದ್ದರು. ಕರ್ತವ್ಯ ಮುಗಿಸಿದ ಬಳಿಕ ಬಸ್ತೀಪುರ ಗ್ರಾಮದ ಶಿಕ್ಷಕಿ ನಾಗರತ್ನಾ ತಮ್ಮ ನಿವಾಸಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅದೇ ಮಾರ್ಗದಲ್ಲಿ ಮೈಸೂರಿಗೆ ತೆರಳಬೇಕಾದ ಶಿಕ್ಷಕಿ ಮಂಜುಳಾ ಅವರಿಗೆ ಡ್ರಾಪ್ ನೀಡಲು ದ್ವಿಚಕ್ರ ವಾಹನದಲ್ಲಿ ಶ್ರೀರಂಗಪಟ್ಟಣ-ಕೆಆರ್‌ಎಸ್ ಹೆದ್ದಾರಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ ಗೇಟ್ ಹಾಗೂ ಪಾಲಹಳ್ಳಿ ಗ್ರಾಮ ನಡುವಿನ ತಿರುವಿನಲ್ಲಿ ಪಂಪ್‌ಹೌಸ್ ಕಡೆಯಿಂದ ವೇಗವಾಗಿ ಬಂದ ಪ್ರವಾಸಿಗರಿದ್ದ ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕುವ ಬಿರುಸಿನಲ್ಲಿ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ಅಪಘಾತದ ರಭಸದಿಂದ ಇಬ್ಬರೂ ಶಿಕ್ಷಕಿಯರು ಸುಮಾರು 100 ಮೀಟರ್ ರಸ್ತೆ ಬದಿಯ ಜಮೀನಿನ ಹಳ್ಳದಲ್ಲಿ ಬಿದ್ದಿದ್ದಾರೆ. ಅಪಘಾತದ ಬಳಿಕ ಭಯದಿಂದ ಸ್ಥಳದಲ್ಲೇ ಕಾರು ಬಿಟ್ಟು ಪ್ರವಾಸಿಗರು ಪರಾರಿಯಾಗಿದ್ದಾರೆ.

ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ನಾಗರತ್ನಾ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ಮಂಜುಳಾ ಅವರನ್ನು ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ಎರಡೂ ಶವಗಳನ್ನು ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಶವಾಗಾರ ಹೊರಭಾಗದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು ಸೇರಿದಂತೆ ಸಹೋದ್ಯೋಗಿ ಶಿಕ್ಷಕರಲ್ಲಿ ಶೋಕ ಮಡುಗಟ್ಟಿತ್ತು.

ಶಾಸಕ ಭೇಟಿ: ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಭೇಟಿ ನೀಡಿ, ಶೀಘ್ರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳ ಹಸ್ತಾಂತರ ಮಾಡುವಂತೆ ವೈದ್ಯರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net