ಇಬ್ಬರ ಬಂಧನ, ಮತ್ತೋರ್ವನಿಗಾಗಿ ಶೋಧ

28RAVIG13-Web
ನಕಲಿ ಅಭ್ಯರ್ಥಿಯಿಂದ ಪೊಲೀಸ್ ದೈಹಿಕ ಸಾಮರ್ಥ್ಯ ಪರೀಕ್ಷೆ ಉತ್ತೀರ್ಣಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮಾರ್ಕೆಟ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಎಸಿಪಿ ಎಸ್.ಆರ್. ಕಟ್ಟೀಮನಿ, ಪಿಎಸ್‌ಐ ವಿಠ್ಠಲ ಹಾವಣ್ಣವರ ಹಾಗೂ ಸಿಬ್ಬಂದಿ ಇದ್ದಾರೆ.
Published on

ಬೆಳಗಾವಿ: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ನಕಲಿ ಅಭ್ಯರ್ಥಿಯಿಂದ ದೈಹಿಕ ಸಾಮರ್ಥ್ಯ ಪರೀಕ್ಷೆ ಉತ್ತೀರ್ಣಗೊಳಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಗೋಕಾಕ ತಾಲೂಕಿನ ಕಳ್ಳಿಗುದ್ದಿ ಗ್ರಾಮದ ನಿವಾಸಿ ಲಕ್ಷ್ಮಣ ವೆಂಕಣ್ಣ ಹೊಸಕೋಟೆ ಹಾಗೂ ಘಟಪ್ರಭಾದ ಸಚಿನ್ ಗುಗ್ಗರಿ ಬಂಧಿತರು.

ಪೊಲೀಸ್ ನೇಮಕಾತಿಯ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಗೊಂಡಿದ್ದ ಲಕ್ಷ್ಮಣ, ಕರ್ತವ್ಯಕ್ಕೆ ಹಾಜರಾಗಲೆಂದು ಜಿಲ್ಲಾ ಪೊಲೀಸ್ ಕಚೇರಿಗೆ ಶುಕ್ರವಾರ ಆಗಮಿಸಿದ್ದಾಗ ದಾಖಲೆಗಳ ಜತೆಗೆ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ 2020ರ ಡಿ. 16ರಂದು ನಡೆಸಲಾಗಿದ್ದ ದೈಹಿಕ ಸಾಮರ್ಥ್ಯ ಪರೀಕ್ಷೆಯ ಚಿತ್ರೀಕರಣದ ದೃಶ್ಯಾವಳಿ ಪರಿಶೀಲಿಸಿದಾಗ ನಕಲಿ ಅಭ್ಯರ್ಥಿ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿರುವುದು ಬೆಳಕಿಗೆ ಬಂದಿತ್ತು.

ಬಳಿಕ ಸಹಾಯಕ ಆಡಳಿತ ಅಧಿಕಾರಿ ಮನೋಜ ಲಾಡ್ ಅವರು ಪ್ರಾಥಮಿಕ ವಿಚಾರಣೆ ನಡೆಸಿ, ಆಯ್ಕೆಯಾದ ವ್ಯಕ್ತಿ ಲಕ್ಷ್ಮಣನಿಂದ ನಕಲಿ ಅಭ್ಯರ್ಥಿ ಏರ್ಪಾಡು ಮಾಡಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದಕ್ಕೆ ಸಹಕರಿಸಿದ್ದ ಸಚಿನ್ ಗುಗ್ಗರಿ ಎಂಬಾತನನ್ನು ಹಾಗೂ ವಂಚನೆ ಮಾಡಿರುವ ಲಕ್ಷ್ಮಣನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿತ ಧಾರವಾಡದ ಆನಂದ ಜೋಗಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಐಪಿಸಿ 120(ಬಿ), 202, 416,417, 419, 420, 465, 468 ಹಾಗೂ 471 ಕಲಂ ಅಡಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net