ಪ್ರತ್ಯೇಕ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ, ಸಂಬಂಧಿಕನ ಸಾವು ಸುದ್ದಿ ಕೇಳಿ ಧಾವಿಸಿದವನೂ ಮೃತ್ಯು

Pub crime
Published on

ಬೆಳ್ತಂಗಡಿ/ಉಪ್ಪಿನಂಗಡಿ: ಬೈಕ್ ಅಪಘಾತಕ್ಕೆ ಸೋಮವಾರ ಇಬ್ಬರು ಸಂಬಂಧಿಕರು ಬಲಿಯಾಗಿದ್ದಾರೆ. ಪುಂಜಾಲಕಟ್ಟೆ ಸಮೀಪ ಎರಡು ಬೈಕ್‌ಗಳು ಡಿಕ್ಕಿಯಾಗಿ ಮಹಮ್ಮದ್ ಶಫೀಕ್(20) ಮೃತಪಟ್ಟರೆ, ಸಂಬಂಧಿಕನ ಸಾವಿನ ಸುದ್ದಿ ತಿಳಿದು ಆತನನ್ನು ನೋಡಲು ಬೈಕಿನಲ್ಲಿ ತೆರಳುತ್ತಿದ್ದ ಮಹಮ್ಮದ್ ಸಫ್ವಾನ್(18) ಕೂಡ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಕರಾಯ ಗ್ರಾಮ ನಿವಾಸಿ ಮಹಮ್ಮದ್ ಶಫೀಕ್ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ. ಬೈಕ್‌ನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಪುಂಜಾಲಕಟ್ಟೆ ಬಳಿ ಎದುರಿನಿಂದ ಬಂದ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು, ಆತ ತೀವ್ರ ಗಾಯಗೊಂಡರು.

ಇನ್ನೊಂದು ಬೈಕ್‌ನಲ್ಲಿದ್ದವರು ಸಣ್ಣ ಪುಟ್ಟ ಗಾಯ ಪರಿಣಾಮ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ತಲೆಗೆ ತೀವ್ರ ಗಾಯವಾದ ಶಫೀಕ್ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು. ಶಫೀಕ್ ಕರಾಯ ನಿವಾಸಿ ಅಬೂಬಕ್ಕರ್-ಸಫಿಯಾ ದಂಪತಿಯ ಇಬ್ಬರು ಗಂಡು ಮಕ್ಕಳ ಪೈಕಿ ಹಿರಿಯವರು. ಅವರ ಸಹೋದರ ಅಶ್ಪಾಕ್ ಹೈಸ್ಕೂಲ್ ವಿದ್ಯಾರ್ಥಿ. ಶಫೀಕ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು.

ಇನ್ನೊಂದೆಡೆ, ಬಂಟ್ವಾಳ ತಾಲೂಕು ಉಳಿ ಗ್ರಾಮದ ಖಂಡಿಗ ಮನೆ ನಿವಾಸಿ ಇಬ್ರಾಹಿಂ ಎಂಬುವರ ಪುತ್ರ ಮಹಮ್ಮದ್ ಸಫ್ವಾನ್ ತನ್ನ ಸಂಬಂಧಿ ಪುಂಜಾಲಕಟ್ಟೆ ಬಳಿ ಅಪಘಾತಕ್ಕೀಡಾದ ಸುದ್ದಿ ತಿಳಿದು, ಅಲ್ಲಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಎಂಬಲ್ಲಿ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆಯಿತು. ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಆತ ರಸ್ತೆಗೆ ಎಸೆಯಲ್ಪಟ್ಟ. ಈ ವೇಳೆ ಸಂಚರಿಸಿದ್ದ ಬಸ್ಸಿನಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತಕ್ಕೆ ಕಾರಣವಾದ ಟಿಪ್ಪರ್ ಸ್ಥಳದಿಂದ ಪರಾರಿಯಾಗಿದ್ದರೂ, ಬೆಳ್ತಂಗಡಿಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯಲ್ಲಿ ಬಸ್ಸಿನ ಪಾತ್ರ ಇಲ್ಲದಿರುವುದನ್ನು ಮನಗಂಡು ಪೊಲೀಸರು ಬಳಿಕ ಬಸ್ಸನ್ನು ಬಿಟ್ಟಿದ್ದಾರೆ. ಮಹಮ್ಮದ್ ಸಫ್ವಾನ್ ತುಂಬೆಯಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದರು.

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net