

ಬೇಲೂರು: ಪಟ್ಟಣದ ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ರಸ್ತೆಯ ಬಸ್ ನಿಲ್ದಾಣ ಮುಂಭಾಗದಲ್ಲಿದ್ದ ಹಳೆಯ ವಾಣಿಜ್ಯ ಕಟ್ಟಡ ಭಾನುವಾರ ಇಬ್ಬರು ಬೀದಿಬದಿ ವ್ಯಾಪಾರಿಗಳನ್ನು ಬಲಿ ಪಡೆದಿದೆ. ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರೆ ಮತ್ತೊಬ್ಬ ಮಹಿಳೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೀದಿಬದಿ ವ್ಯಾಪಾರಿಗಳಾದ ಅಮರನಾಥ್(36), ನಜೀರ್(55) ಮೃತಪಟ್ಟವರು. ಜ್ಯೋತಿ(38), ಲೀಲಮ್ಮ (60) ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಲ್ಪಾ(34) ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಳೆಯದಾದ ಈ ಮಳಿಗೆಗಳನ್ನು ತಾತ್ಕಾಲಿಕವಾಗಿ ಸಿಮೆಂಟ್ ಇಟ್ಟಿಗೆಯಿಂದ ಗೋಡೆ ನಿರ್ಮಿಸಿ, ಛಾವಣಿಗೆ ಸಿಮೆಂಟ್ ಶೀಟ್‌ಗಳನ್ನು ಹಾಕಲಾಗಿತ್ತು. ಮಳಿಗೆ ಮುಂಭಾಗ ಸಜ್ಜಾ ನಿರ್ಮಿಸಲಾಗಿತ್ತು. ಆದರೆ ದಿನ ಕಳೆದಂತೆ ಕಟ್ಟಡದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದ್ದವು. ಖಾಲಿಯಾಗಿದ್ದ ಶಿಥಿಲ ಮಳಿಗೆಗಳ ಸಜ್ಜಾ ಕೆಳಭಾಗದಲ್ಲಿ ಕೆಲ ಬೀದಿಬದಿ ವ್ಯಾಪಾರಿಗಳು ಹಣ್ಣು, ತರಕಾರಿ, ಸೊಪ್ಪು, ಹೂವು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಶಿಥಿಲಗೊಂಡಿದ್ದ ಕಟ್ಟಡದ ಕಾಂಕ್ರೀಟ್‌ನಿಂದ ನಿರ್ಮಿಸಿದ್ದ ಸಜ್ಜಾ ಮಧ್ಯಾಹ್ನ ಕುಸಿದು ಬಿದ್ದಿದೆ. ಈ ವೇಳೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ಅಮರನಾಥ್, ನಜೀರ್, ಜ್ಯೋತಿ ಹಾಗೂ ಗ್ರಾಹಕರಾದ ಲೀಲಮ್ಮ, ಶಿಲ್ಪಾ ಮೇಲೆ ಅವಶೇಷ ಕುಸಿದು ಬಿದ್ದಿದೆ. ಪರಿಣಾಮ ಅಮರನಾಥ್ ಸ್ಥಳದಲ್ಲೇ ಮೃತರಾದರು. ತಕ್ಷಣ ಕ್ರೇನ್ ಮೂಲಕ ಅವಶೇಷಗಳಡಿಯಲ್ಲಿ ಸಿಲುಕಿದ್ದ ನಜೀರ್, ಲೀಲಮ್ಮ, ಜ್ಯೋತಿ ಅವರನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಜೀರ್ ಕೊನೆಯುಸಿರೆಳೆದರು. ಲೀಲಮ್ಮ, ಜ್ಯೋತಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಲ್ಪಾ ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ತಹಸೀಲ್ದಾರ್ ಎಂ.ಮಮತಾ, ಡಿವೈಎಸ್‌ಪಿ ಲೋಕೇಶ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಸಮಯ ಪ್ರಜ್ಞೆ ಮೆರೆದ ಸಾರ್ವಜನಿಕರು: ಘಟನೆ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸಮಯ ಪ್ರಜ್ಞೆ ಮೆರೆದು ಕ್ರೇನ್ ತರಿಸಿ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ಕಳುಹಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ಜನ-ವಾಹನ ದಟ್ಟಣೆ ಏರ್ಪಟ್ಟಿತ್ತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು.
ಪೊಲೀಸ್ ಇನ್‌ಸ್ಪೆಪೆಕ್ಟರ್ ರೇವಣ್ಣ, ವೃತ್ತ ನಿರೀಕ್ಷಕ ಜಗದೀಶ್, ಪಿಎಸ್‌ಐ ಪಾಟೀಲ್, ಸುರೇಶ್, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಸದಸ್ಯರಾದ ಜಮಾಲೂದ್ದೀನ್, ಜಗದೀಶ್ ಸೇರಿದಂತೆ ಇತರರಿದ್ದರು.
ತೆರವುಗೊಳಿಸಲು ಒತ್ತಾಯ: ಪಟ್ಟಣದ ದೇಗುಲ ರಸ್ತೆಯಲ್ಲಿರುವ ಈ ಹಳೆಯದಾದ ಕಟ್ಟಡದ 9 ವಾಣಿಜ್ಯ ಮಳಿಗೆಗಳಿಗೂ ಹೊಂದಿಕೊಂಡಂತೆ ಬೃಹತ್ ಕಾಂಕ್ರೀಟ್ ಸಜ್ಜಾ ನಿರ್ಮಿಸಲಾಗಿತ್ತು. ಜತೆಗೆ ಈ ಮಳಿಗೆಗಳ ಹಿಂಭಾಗದಲ್ಲಿದ್ದ ಇನ್ನೊಂದು ಮಳಿಗೆಗೆ ಹೋಗಲು 9 ಮಳಿಗೆಗಳ ನಡುವೆ ಇದ್ದ ಎರಡು ಮಳಿಗೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿತ್ತು. ಆದರೆ ಎಲ್ಲ ಮಳಿಗೆಗಳಿಗೂ ಹೊಂದಿಕೊಂಡಂತೆ ಸಜ್ಜಾವಿದ್ದುದನ್ನು ತೆರವು ಗೊಳಿಸಿದ್ದರಿಂದ ಮಳಿಗೆಗಳ ಮೇಲ್ಭಾಗದ ಸಜ್ಜಾ ಶಿಥಿಲಾವಸ್ಥೆ ತಲುಪಿತ್ತು. ಅಲ್ಲದೆ ಅಧಿಕ ಭಾರ ಇದ್ದಿದ್ದರಿಂದ ಭಾನುವಾರ ಮಧ್ಯಾಹ್ನ ಕುಸಿದು, ಬೀದಿಬದಿ ವ್ಯಾಪಾರಿಗಳ ಮೇಲೆ ಬಿದ್ದಿರುವುದು ದೊಡ್ಡ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೆ ಇದೇ ಕಟ್ಟಡಕ್ಕೆ ಹೊಂದಿಕೊಂಡಂತಿದ್ದ ಇತರ ಕಟ್ಟಡಗಳು ಸಹ ಇದೇ ರೀತಿ ಶಿಥಿಲಾವಸ್ಥೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಕೈಗೊಂಡು ಕಟ್ಟಡ ಸಹ ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಬದುಕಿದ ಬಡಜೀವ: ಪ್ರತಿದಿನ ನಾನು ಇದೇ ಮಳಿಗೆ ಸಜ್ಜಾ ಕೆಳಗೆ ಹೂವಿನ ವ್ಯಾಪಾರ ಮಾಡುತ್ತೇನೆ. ಆದರೆ ಇವತ್ತು ನಾನು ಒಬ್ಬರಿಗೆ ಹೂವನ್ನು ಕೊಟ್ಟು ನಿದ್ದೆ ಬರುತ್ತಿದೆ ಎಂದು ಹಿಂಭಾಗದ ರೋಲಿಂಗ್ ಶಟರ್ಸ್‌ಗೆ ಒರಗಿಕೊಂಡೆ. ಅಷ್ಟರಲ್ಲೇ ಮೇಲಿನಿಂದ ಏನೋ ಶಬ್ದ ಬಂತು. ನೋಡ ನೋಡುತ್ತಿದ್ದಂತೆ ದೊಡ್ಡದಾದ ಸಜ್ಜಾ ಕೆಳಗಿದ್ದವರ ಮೇಲೆಯೇ ಬಿತ್ತು. ಆದರೆ ನಾನು ಸ್ವಲ್ಪ ಹಿಂದಿದ್ದರಿಂದ ಪ್ರಾಣ ಉಳಿದಿದೆ. ಲೀಲಮ್ಮ ಎಂಬುವವರು ಬಂದು ನೆರಳಿಗಾಗಿ ಕುಳಿತಿದ್ದರು. ಅವರೆಲ್ಲರ ಮೇಲೆ ಸಜ್ಜಾ ಬಿದ್ದಿದ್ದು ನೋಡಿ ಶಾಕ್ ಆಗಿದ್ದರಿಂದ ನನಗೆ ಏನು ಮಾಡಬೇಕೆಂದು ತೋಚದೆ ಕೈಕಾಲುಗಳು ಅಲುಗಾಡದಂತಾಗಿತ್ತು. ನಂತರ ಸಾವರಿಸಿಕೊಂಡು ನೋಡಿದಾಗ ನಮ್ಮೊಟ್ಟಿಗಿದ್ದವರು ಸಾವನ್ನಪ್ಪಿದ್ದ, ಕೆಲವರು ಗಾಯಗೊಂಡಿದ್ದರು ಎಂದು ಹೂವಿನ ವ್ಯಾಪಾರಿ ಸೋಮಶೇಖರ್ ಘಟನೆ ವಿವರಿಸಿದರು.