

ಕೊಳ್ಳೇಗಾಲ: ಮೈಸೂರಿನಿಂದ ಕಾರಿನಲ್ಲಿ ಮೂವರು ಸ್ನೇಹಿತರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಬುಧವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರು ತಾಲೂಕಿನ ಕುಂತೂರು ಕೆರೆಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಮೈಸೂರಿನ ಕುವೆಂಪುನಗರ ನಿವಾಸಿ ಉಮೇಶ್ ಅವರ ಪುತ್ರ ಊರ್ಜಿತ್ (25), ಸಂತೇಮರಳ್ಳಿ ಹೋಬಳಿಯ ಗಣಿಗನೂರು ಗ್ರಾಮದ ನಿವಾಸಿ ಶಿವಶಂಕರ್ ಪುತ್ರಿ ಶುಭಾ (22) ಮೃತಪಟ್ಟವರು. ಅದೃಷ್ಟವಶಾತ್ ಮೈಸೂರಿನ ಕನಕಗಿರಿ ನಿವಾಸಿ ಸುರೇಶ್ ಎಂಬುವರ ಮಗ ಮನೀತ್(21) ಬದುಕುಳಿದಿದ್ದಾರೆ.
ಈ ಮೂವರು ಸ್ನೇಹಿತರಾಗಿದ್ದು, ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ಚಿಂತಿಸಿದ್ದು, ತಡರಾತ್ರಿ ಮೈಸೂರಿನಿಂದ ಕಾರಿನಲ್ಲಿ ತೆರಳಿದ್ದಾರೆ. ಊರ್ಜಿತ್ ಕಾರನ್ನು ಚಲಾಯಿಸುತ್ತಿದ್ದ. ಇನ್ನಿಬ್ಬರು ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದರು. ಮಾರ್ಗಮಧ್ಯೆ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿ ರಾತ್ರಿ 2 ಗಂಟೆ ಸುಮಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಬಿದಿದ್ದೆ. ಮನೀತ್ ಕಾರಿನ ಹಿಂಬದಿ ಗ್ಲಾಸ್ ನಿಂದ ಹೊರ ಬಂದು ಪ್ರಾಣ ಉಳಿಸಿ ಕೊಂಡಿದ್ದಾನೆ. ಶುಭಾ ಹಾಗೂ ಚಾಲಕ ಊರ್ಜಿತ್ ಹೊರಬರಲಾಗದೆ ಕಾರಿನೊಳಗೆ ಮೃತಪಟ್ಟಿದ್ದಾರೆ.
ರಾತ್ರಿಯಲ್ಲಿ ಮನೀತ್ ಕೂಗಾಟ ಕೇಳಿ ರಸ್ತೆಯಲ್ಲಿ ತೆರಳಿತ್ತಿದ್ದ ಆಂಬುಲೆನ್ಸ್ ಚಾಲಕ ಹಾಗೂ ಗಸ್ತಿನಲ್ಲಿದ್ದ ಪೊಲೀಸರು ಕೆರೆಯ ಬಳಿ ತೆರಳಿದ್ದಾರೆ. ನಂತರ, ಅಗ್ನಿಶಾಮಕ ದಳದ ಸಿಬ್ವಂದಿ ಸ್ಥಳಕ್ಕೆ ತೆರಳಿ ಕಾರಿನೊಳಗಿದ್ದ ಮೃತ ದೇಹಗಳು ಹಾಗೂ ಕಾರನ್ನು ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.