ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಎರಡು ದಿನ ಮೀಸಲು

Two days reserved for discussion of North Karnataka issues
ಸಿಂದಗಿ ಪಟ್ಟಣದಲ್ಲಿ ವಿಧಾನಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಕೆ.ಎಚ್. ಸೋಮಾಪುರ ಅವರ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಬಿ.ಪಿ. ಕರ್ಜಗಿ, ಅರುಣ ಶಹಾಪೂರ, ಡಾ. ಅರವಿಂದ ಮನಗೂಳಿ, ಸಾಯಿನಾಥ ಮತ್ತಿತರರಿದ್ದರು.
Published on

ಸಿಂದಗಿ:ಉತ್ತರ ಕರ್ನಾಟಕ ಬೆಳಗಾವಿಯಲ್ಲಿ ಡಿ. 4ರಿಂದು ನಡೆಯಲಿರುವ ಅಧಿವೇಶನದ ಆರಂಭದ ಎರಡು ಹಾಗೂ ಮೂರನೇ ದಿನಗಳಲ್ಲಿ ಕೇವಲ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ಚರ್ಚೆಗೆ ಮೀಸಲಿರಿಸುವಂತೆ ಸಿಎಂಗೆ ತಿಳಿಸಿರುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶುಕ್ರವಾರ ಪಿಇಎಸ್ ಶಿಕ್ಷಣ ಸಂಸ್ಥೆಯ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕೆ.ಎಚ್. ಸೋಮಾಪುರ ಅವರ ಐದು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಈ ಹಿಂದೆ ಮೇಲ್ಮನೆ ಹಾಗೂ ಕೆಳಮನೆಯಲ್ಲಿನ ಅಧಿವೇಶನಗಳಲ್ಲಿ ನಡೆಯುತ್ತಿದ್ದ ಕಾರ್ಯಕಲಾಪಗಳೇ ಬೇರೆ.

ಈಗ ನಡೆಯುತ್ತಿರುವುದೇ ಬೇರೆ. ವಿಷಯಾನುಸಾರವಾಗಿ ಪ್ರಶ್ನಿಸಲು ಉತ್ತರಿಸಲು ಸಾಧ್ಯವಾಗದ ಸ್ಥಿತಿಯಿದೆ. ಆದರೆ ನಾಯಕರಾದವರು ಮತದಾರರು ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಕಳೆದ 2015ರಿಂದ ಇಂದಿನವರೆಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿಲ್ಲ. ಈ ಕುರಿತು ಸಿಎಂ ಅವರಲ್ಲಿ ಚರ್ಚಿಸಿದಾಗ ಗ್ಯಾರಂಟಿ ಸಂಗತಿಗಳನ್ನೇ ಉಚ್ಛರಿಸಿದರು.

ಆದರೆ ನಾನು ಮುಂದಿನ 5-6 ತಿಂಗಳಲ್ಲಾದರೂ ಶಿಕ್ಷಕ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಕುರಿತು ಗ್ಯಾರಂಟಿ ಕೇಳಿರುವೆ.

ನಾನು ಶಿಕ್ಷಣ ಮಂತ್ರಿಯಾದ ನಂತರದಲ್ಲಿ ಶಿಕ್ಷಣದಿಂದ ವಂಚಿತವಾಗಿರುವ ಹೆಣ್ಣು ಮಕ್ಕಳ ವಿವರ ಅಧಿಕಾರಿಗಳಿಗೆ ಕೇಳಿದಾಗ ಆರು ತಿಂಗಳಿನ ನಂತರ ಅವರು 1623 ಪ್ರೌಢ ಹಾಗೂ 713 ಜ್ಯೂನಿಯರ್ ಕಾಲೇಜುಗಳು ಬೇಕಿದ್ದವು.

ಅದಕ್ಕೆ 398ಕೋಟಿ ರೂ.ಗಳಷ್ಟು ಅನುದಾನ ಬೇಕಿತ್ತು. ಆದರೆ ನಾವು 1039 ಸರ್ಕಾರಿ ಪ್ರೌಢ ಮತ್ತು 500 ಜ್ಯೂನಿಯರ್ ಕಾಲೇಜುಗಳನ್ನು ಗ್ರಾಪಂ ಹಂತದ ಸ್ಥಳಗಳನ್ನು ಗುರುತಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳಿಗೆ ಆಧ್ಯತೆ ನೀಡಿದೆ.

ಇಷ್ಟೆಲ್ಲದ್ದಕ್ಕೂ ನನ್ನ ಸಹೋದರಿಗೆ ಸಿಗದ ಶಿಕ್ಷಣದ ಅರಿವು ನನ್ನಲ್ಲಿತ್ತು. ಅವಳಿಗೆ ಬಂದ ಸಮಸ್ಯೆ ಬೇರೆ ಹೆಣ್ಣು ಮಕ್ಕಳಿಗೆ ಬರದಂತೆ ಎಚ್ಚರ ವಹಿಸಿರುವ ಕಾರಣ ಇಂದು ಪ್ರತಿಶತ 80ರಿಂದ 90ರಷ್ಟು ಹೆಣ್ಣು ಮಕ್ಕಳು ಶಿಕ್ಷಣವಂತರಾಗುತ್ತಿದ್ದಾರೆ ಎಂದು ತಮ್ಮ ಬದುಕಿನ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದರು.

ಲೇಖಕ ಕೆ.ಎಚ್. ಸೋಮಾಪುರ ಅವರ ಸಂಘರ್ಷ(ನಾಟಕ), ಜೀವನ ಸಾಹಿತ್ಯ ಮತ್ತು ಬಯಕೆಗಳ ಬೆನ್ನೇರಿ ಕಾದಂಬರಿ ಕುರಿತು ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಮಾತನಾಡಿದರೆ, ವಿಶ್ರಾಂತ ಪ್ರಾಧ್ಯಾಪಕ ಎಸ್.ವೈ. ಬೀಳಗಿ ಅವರು ಭಾವಬಂಧ ಹಾಗೂ ಭಾವದರ್ಪಣ ಷಟ್ಪದಿ ಕೃತಿಗಳ ಕುರಿತು ಮಾತನಾಡಿದರು. ವಿಪ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿದರು.

ಸಾರಂಗಮಠ-ಗಚ್ಚಿನಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪಿಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು. ಡಾ. ಅರವಿಂದ ಮನಗೂಳಿ, ತಾಳಿಕೋಟೆಯ ಎಸ್‌ಎಸ್‌ವಿ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪಾಟೀಲ, ಕೃತಿಕಾರ ಕೆ.ಎಚ್. ಸೋಮಾಪುರ, ಪಿಇಎಸ್ ಸಂಸ್ಥೆಯ ಅಧ್ಯಕ್ಷ ಸಂತೋಷಕುಮಾರ ಕರ್ಜಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net