ಎರಡು ದಿನ ಪೂರೈಸಿದ ರೈತರ ಧರಣಿ: ಪೆರಿಫೆರಲ್ ರಸ್ತೆ ನಿರ್ವಿುಸಲು ಒತ್ತಾಯ, ಸರ್ವೆ ಕಲ್ಲು ಕಿತ್ತು ತಂದು ಅಸಹಕಾರ ಚಳವಳಿ

former
Published on

ಬೆಂಗಳೂರು: ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬಿಡಿಎ ಕೇಂದ್ರ ಕಚೇರಿ ಮುಂಭಾಗದಲ್ಲಿ ಕೈಗೊಂಡಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಮಂಗಳವಾರ 2ನೇ ದಿನ ಪೂರೈಸಿದೆ. ಇದೀಗ ಅಸಹಕಾರ ಚಳವಳಿ ಆರಂಭಿಸಿರುವ ರೈತರು 65 ಹಳ್ಳಿಗಳಲ್ಲಿ ಸಮೀಕ್ಷೆ ಮಾಡಿ ನೆಟ್ಟಿದ್ದ ಸರ್ವೆ ಕಲ್ಲುಗಳನ್ನು ಕಿತ್ತುತಂದು ಧರಣಿ ಮುಂದುವರಿಸಿದ್ದಾರೆ.

ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪೆರಿಫೆರಲ್ ರಿಂಗ್ ರೋಡ್ ನಿರ್ವಣಕ್ಕೆ ಸರ್ಕಾರ 2004ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿತ್ತು. ಆದರೆ, 16 ವರ್ಷಗಳಿಂದ ಕಾಮಗಾರಿ ಆರಂಭಿಸಿಲ್ಲ. ಇದರಿಂದಾಗಿ 65 ಹಳ್ಳಿಗಳ ರೈತರು ಭೂಮಿ ಹೊಂದಿದ್ದರೂ, ಅದರ ಮೇಲೆ ಹಕ್ಕು ಕಳೆದುಕೊಂಡು ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ 2020-21ನೇ ಸಾಲಿನಲ್ಲಿ ರಿಂಗ್ ರಸ್ತೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪ್ರಸ್ತುತ ಮಾರುಕಟ್ಟೆ ದರದಂತೆ ಪರಿಹಾರ ನೀಡುವ ಜತೆಗೆ ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ಯೋಜನೆ ಕೈಬಿಟ್ಟು, ರೈತರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.

65 ಗ್ರಾಮಗಳ ರೈತರು ಸೋಮವಾರದಿಂದ ಧರಣಿ ಆರಂಭಿಸಿದ್ದೇವೆ. ಬಿಡಿಎ ಕಚೇರಿ ಎದುರಿನ ರಸ್ತೆಯಲ್ಲೇ ರಾತ್ರಿ ಮಲಗಿದ್ದೇವೆ. ಇಂದೂ ಕೂಡ (ಮಂಗಳವಾರ) ಕಚೇರಿ ಎದುರೇ ಅಡುಗೆ ಮಾಡಿಕೊಂಡು ಊಟ ಮಾಡಿ, ಧರಣಿ ಮುಂದುವರಿಸಿದ್ದೇವೆ. ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ. ಪೆರಿಫೆರಲ್ ರಿಂಗ್ ರಸ್ತೆಗೆ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ನಾಗಣ್ಣ, ಕಾರ್ಯದರ್ಶಿ ಸುರೇಶ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ರಘು, ಸದಸ್ಯ ಶ್ರೀನಿವಾಸ ರೆಡ್ಡಿ ಸೇರಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಉಳುಮೆ ಮಾಡುತ್ತೇವೆ: ಭೂಸ್ವಾಧೀನ ಮಾಡಿಕೊಳ್ಳಲು ಸಮೀಕ್ಷೆ ನಡೆಸಿ 65 ಗ್ರಾಮಗಳಲ್ಲಿ ನೆಡಲಾಗಿದ್ದ ಸರ್ವೆ ಕಲ್ಲುಗಳ ಪೈಕಿ ತಲಾ ಒಂದೊಂದು ಸರ್ವೆ ಕಲ್ಲು ಕಿತ್ತುತಂದು ಸದ್ಯ ಅಸಹಕಾರ ಚಳವಳಿ ಮಾಡಲಾಗಿದೆ. ಇದಕ್ಕೆ ಮಣಿದು ಸರ್ಕಾರ ಪೆರಿಫೆರಲ್ ರಿಂಗ್ ರಸ್ತೆ ನಿರ್ವಿುಸುವ ನಿರ್ಧಾರ ಕೈಗೊಂಡರೆ ಒಳ್ಳೆಯದು. ಇಲ್ಲವಾದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿರುವ ಸ್ಥಳವನ್ನು ಮರುವಶಕ್ಕೆ ಪಡೆದು ಉಳುಮೆ ಮಾಡುತ್ತೇವೆ. ಆ ಭೂಮಿಯೊಳಗೆ ಯಾವೊಬ್ಬ ಅಧಿಕಾರಿಯೂ ಕಾಲಿಡದಂತೆ ನೋಡಿಕೊಳ್ಳುತ್ತೇವೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net