ಬಂಡಿಗಣಿ ಮಠದಿಂದ ಎರಡು ದಿನ ಅನ್ನದಾಸೋಹ

Two-day Annadasa Soha from Bandigani Math
ಮುಧೋಳದಲ್ಲಿ ಜರುಗುವ ರನ್ನ ಉತ್ಸವ-2025ರಲ್ಲಿ ಬಂಡಿಗಣಿಯ ನೀಲಮಾಣಿಕ ಬಸವಗೋಪಾಲಮಠದಿಂದ ಎರಡು ದಿನಗಳ ಕಾಲ ಅನ್ನದಾಸೋಹ ವ್ಯವಸ್ಥೆ ಮಾಡಿಸುವುದಾಗಿ ತಿಳಿಸಿದ ಅನ್ನದಾನೇಶ್ವರ ಶ್ರೀಗಳನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಶಂಕರ ತಿಮ್ಮಾಪುರ, ಶ್ರೀಶೈಲ ಕಂಕಣವಾಡಿ, ಗಿರೀಶ ಸ್ವಾದಿ, ಆರ್.ಎಸ್. ದಾನಪ್ಪಗೋಳ, ರಮೇಶ ಕಾಡರಕೊಪ್ಪ, ಶಿವಾನಂದ ರಬಕವಿ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಪಟ್ಟಣದಲ್ಲಿ ಫೆ. 22ರಿಂದ 24ರವರೆಗೆ ಜರುಗಲಿರುವ ರನ್ನ ವೈಭವದಲ್ಲಿ ಫೆ. 23, 24ರಂದು ಮಠದ ವತಿಯಿಂದ ಉಪಾಹಾರ ಹಾಗೂ ಭೋಜನ ವ್ಯವಸ್ಥೆ ಮಾಡಿಸುವುದಾಗಿ ತಿಳಿಸಿದ ಅನ್ನದಾನೇಶ್ವರ ಶ್ರೀಗಳನ್ನು ಬಂಡಿಗಣಿ ಮಠದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಮುಖಂಡ ಶಂಕರ ತಿಮ್ಮಾಪೂರ ಸನ್ಮಾನ ನೆರವೇರಿಸಿ ಮಾತನಾಡಿ, ಅನ್ನದಾನೇಶ್ವರ ಶ್ರೀಗಳು ಜಿಲ್ಲಾಡಳಿತ, ಜಿಪಂ, ರನ್ನ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜತೆಗೂಡಿ ರನ್ನ ವೈಭವದಲ್ಲಿ ಅಂದಾಜು 50 ಸಾವಿರ ಜನರಿಗೆ ಊಟ, ಉಪಾಹಾರ ಕಲ್ಪಿಸಲು ಮುಂದಾಗಿರುವುದು ವಿಶೇಷ. ಈ ಮೂಲಕ ಅನ್ನ ದಾಸೋಹದ ಮಹತ್ವ ಸಾರಲಾಗುತ್ತಿದೆ. ಶ್ರೀಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

ಜಿಲ್ಲಾ ಆಹಾರ ಸಮಿತಿ ಅಧ್ಯಕ್ಷ ಶ್ರೀಶೈಲ ಕಂಕಣವಾಡಿ ಮಾತನಾಡಿ, ಬಂಡಿಗಣಿ ಮಠದ ಶ್ರೀಗಳು ಸ್ವಯಂಪ್ರೇರಿತವಾಗಿ ಕಾರ್ಯಕ್ರಮದ ಅನ್ನದಾಸೋಹಕ್ಕೆ ಸಹಮತ ತೋರಿರುವುದು ಸ್ವಾಗತಾರ್ಹ. ಜತೆಗೆ ಭೋಜನ ವ್ಯವಸ್ಥೆಯಲ್ಲಿ ಶ್ರೀಮಠದ ಭಕ್ತರನ್ನು ಕೂಡ ಆಹ್ವಾನಿಸಲಾಗಿದೆ ಎಂದರು.

ಅನ್ನದಾನೇಶ್ವರ ಶ್ರೀಗಳು ಸನ್ಮಾನ ಸ್ವೀಕರಿಸಿ ಮಾತನಾಡಿ, ಬಂಡಿಗಣಿಯ ನೀಲಮಾಣಿಕ ಬಸವಗೋಪಾಲಮಠದಿಂದ ನಿರಂತರ ಅನ್ನದಾಸೋಹ ಎಲ್ಲ ದೇವಸ್ಥಾನ, ಜಾತ್ರೆಗಳಲ್ಲಿ ಸಾಮಾನ್ಯ. ಇಂತಹ ಜಿಲ್ಲಾಮಟ್ಟದ ಉತ್ಸವದಲ್ಲಿ ಅವಕಾಶ ದೊರೆತಿರುವುದು ಖುಷಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ಗಿರೀಶ ಲಕ್ಷಾಣಿ, ಆರ್.ಎಸ್. ದಾನಪ್ಪಗೋಳ, ರಮೇಶ ಕಾಡರಕೊಪ್ಪ, ಶಿವಾನಂದ ರಬಕವಿ, ಭೀಮು ರಬಕವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net