ಯಾಂತ್ರೀಕರಣದೆಡೆಗೆ ರೈತರ ಆಸಕ್ತಿ: ಕೃಷಿ ಮೇಳದಲ್ಲಿ ಸೆಳೆದ ಆಧುನಿಕ ಪದ್ಧತಿ

Two day agricultural fair Mandya
Published on

ಮಂಡ್ಯ: ಕೂಲಿಯಾಳು ಸಮಸ್ಯೆಯಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತಿರುವ ಹೊತ್ತಿನಲ್ಲಿ ಪರ್ಯಾಯ ವ್ಯವಸ್ಥೆಯತ್ತ ರೈತರು ಗಮನ ಹರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನ ವಿ.ಸಿ ಫಾರ್ಮ್‌ನಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಯಂತ್ರೋಪಕರಣ ಕಡೆಗೆ ರೈತರು ಹೆಚ್ಚು ಗಮನಹರಿಸಿದರು.

ದಿನಕಳೆದಂತೆ ಹಲವು ಸಮಸ್ಯೆಯಿಂದಾಗಿ ಕೃಷಿಯಲ್ಲಿ ಬಿಕ್ಕಟ್ಟು ಎದುರಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಬೇಸಾಯ ಮಾಡಿಸಲು ರೈತರಿಗೆ ಸಾಥ್ ಕೊಡಲು ಕೂಲಿಯಾಳುಗಳ ಸಿಗುತ್ತಿಲ್ಲ. ಪರಿಣಾಮ ಅನೇಕರು ಕೃಷಿಯಿಂದ ವಿಮುಖರಾಗುವ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಯಂತ್ರಗಳ ಮಹತ್ವದ ಪಾತ್ರ ವಹಿಸುತ್ತಿದೆ. ಇದಕ್ಕೆ ಪೂರಕವಾಗಿ ಕೃಷಿ ಮೇಳದಲ್ಲಿ ವಿನೂತನ ಮಾದರಿಯ ಯಂತ್ರಗಳ ಪ್ರಾತ್ಯಕ್ಷತೆಯತ್ತ ರೈತರು ಆಕರ್ಷಿತರಾದರು.

ಮಾನವಶಕ್ತಿ ಇಲ್ಲದೆ ಕೃಷಿ ಪದ್ಧತಿ ಮಾಡುವ ನಿಟ್ಟಿನಲ್ಲಿ ಭತ್ತವನ್ನು ಯಂತ್ರದ ಸಹಾಯದಿಂದ ಮಾಡುವ ಡ್ರಂ ಸೀಡರ್, ನಾಟಿ ಮಾಡುವ ಯಂತ್ರ, ಲೇಸರ್ ಲೆವೆಲರ್, ಕಬ್ಬನ್ನು ನೆಡುವ ಸಾಧನ, ಕಬ್ಬಿನ ಪೈರು ನಾಟಿ ಮಾಡುವ ಯಂತ್ರ, ಬೇಲರ್, ಕೃಷಿ ತ್ಯಾಜ್ಯ ಪುಡಿ ಮಾಡುವ ಯಂತ್ರ, ಟ್ರಾೃಕ್ಟರ್‌ಚಾಲಿತ ಗುಂಡಿ ತೆಗೆಯುವ ಯಂತ್ರ, ಮಲ್ಟಿಪರ್‌ಪಸ್ ಪವರ್‌ಇಂಟರ್ ಕಲ್ಟಿವೇಟರ್ ಸೇರಿದಂತೆ ಹಲವು ರೀತಿಯ ಯಂತ್ರಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ. ಮಾತ್ರವಲ್ಲದೆ ಈ ಯಂತ್ರಕ್ಕೆ ನೀಡಲಾಗುವ ಸಹಾಯಧನ ಸೇರಿದಂತೆ ರೈತರ ವಂತಿಕೆ ಎಂಬಿತ್ಯಾದಿ ಮಾಹಿತಿ ನೀಡಲಾಯಿತು. ರೈತರು ಇದನ್ನು ಆಸಕ್ತಿ ವಹಿಸಿ ಕೇಳಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಡ್ರೋನ್‌ನಿಂದ ಔಷಧ ಸಿಂಪಡಣೆ: ಮೇಳದಲ್ಲಿ ರೈತರನ್ನು ಹೆಚ್ಚು ಆಕರ್ಷಿಸಿದ್ದು ಡ್ರೋಣ್. ಅಂದರೆ ಇದರ ಮೂಲಕ ಔಷಧ ಸಿಂಪಡಣೆ ಮಾಡುವ ಬಗ್ಗೆ ರೈತರು ಮಾಹಿತಿ ಪಡೆದುಕೊಂಡರು. ಎರಡಕ್ಕೂ ಹೆಚ್ಚು ಕಡೆ ಇದರ ಬಗ್ಗೆ ಮಾಹಿತಿ ನೀಡುವ ಮಳಿಗೆ ಇದ್ದವು. ಇದಲ್ಲದೆ ಕುರಿ/ಮೇಕೆ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಅಂತೆಯೇ ಯಂತ್ರ ಮತ್ತು ಮಾನವ ಚಾಲಿತ ಹಾಲು ಕರೆಯುವ ಯಂತ್ರ, ಸೋಲಾರ್ ಪಂಪ್‌ಸೆಟ್, ಮುಳ್ಳಿನ ಬೇಲಿ ಮಳಿಗೆ ಗಮನಸೆಳೆದವು.

ಈ ನಡುವೆ ವಿ.ಸಿ ಫಾರ್ಮ್ ವಿಜ್ಞಾನಿಗಳು ಬೆಳೆಸಿರುವ ವಿಭಿನ್ನ ತಳಿಯ ಭತ್ತ, ಅವರೆಕಾಯಿ, ಸೊಪ್ಪು, ವಿದೇಶಿ ಸೊಪ್ಪು ಸೇರಿದಂತೆ ಹಲವು ಬೆಳೆ ಗಮನಸೆಳೆಯುತ್ತವೆ. ಮೇಳದಲ್ಲಿ ಎರಡು ಮೂರು ಗಂಟೆ ಅಡ್ಡಾಡಿಕೊಂಡು ಬಂದವರಿಗೆ ಕೇವಲ 20 ರೂ, ಕೆಲವರು ಉಚಿತವಾಗಿಯೇ ಊಟ ಮಾಡಿದರು. ಮುದ್ದೆ, ಅವರೇಕಾಳು ಪಲ್ಯ, ಸಿರಿಧಾನ್ಯದ ಪಾಯಸ ಜನರಿಗೆ ಇಷ್ಟವಾಯಿತು. ವೈವಿಧ್ಯಮಯವಾಗಿರುವ ಕೃಷಿ ಮೇಳ ನ.27ರಂದು ಅಂದರೆ ಇಂದೇ ಕೊನೇ ದಿನವಾಗಿದೆ. ವಾಹನದ ವ್ಯವಸ್ಥೆ ಇರುವುದರಿಂದ ಒಮ್ಮೆ ಕೃಷಿ ಪ್ರಪಂಚವನ್ನು ನೋಡಿಕೊಂಡು ಬರಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net